ನವಲಗುಂದ : ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು. ಅದನ್ನು ಬಿತ್ತಿ ಬೆಳೆದೇ ಪಡೆಯಬೇಕು. ಆದರೆ ಬರ, ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ಕೃಷಿ ಚಟುವಟಿಕೆ ಸವಾಲಾಗಿದೆ. ಹೀಗಿದ್ದರೂ 'ನಾನು ಬಿತ್ತಿ ಬೆಳೆಯುವೆ, ದೇಶದ ಜನರಿಗೆ ಅನ್ನ ಹಾಕುವೆ' ಎನ್ನುವ ಗಟ್ಟಿ ಧ್ವನಿಯ ರೈತರನ್ನು ನಾನು ನೋಡಿದ್ದೇವೆ, ಕೇಳಿದ್ದೇವೆ. ಇದಕ್ಕೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದ ರೈತ ಪಾಂಡು ಹೇಮರೆಡ್ಡಿ ಕರ್ಮಳಿ ಸಾಕ್ಷಿಯಾಗಿದ್ದಾರೆ.
ಆಧುನಿಕ ಯುಗದಲ್ಲಿ ಕೃಷಿ ಮಾನಸಿಕ ನೆಮ್ಮದಿ ನೀಡುತ್ತದೆ. ಕೃಷಿಯಲ್ಲಿ ಆದಾಯವೇ ಮುಖ್ಯವಾಗಿರದೆ ಆಸಕ್ತಿಯೂ ಅಗತ್ಯ. ನಮ್ಮ ಶ್ರಮ, ಆಸಕ್ತಿಗೆ ದೇಶಪಾಂಡೆ ಫೌಂಡೇಶನ್ ಸಾಥ್ ನೀಡಿದೆ. ಫೌಂಡೇಶನ್ ಸಹಾಯದಿಂದ ನಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿದ್ದರಿಂದ ಆದಾಯ ದ್ವಿಗುಣವಾಗಿದೆ ಎನ್ನುತ್ತಾರೆ ಪಾಂಡು ಕರ್ಮಳಿ.
ಸಕಾಲಕ್ಕೆ ಮಳೆಯಾಗದಿದ್ದರೂ ಕೃಷಿ ಹೊಂಡದಲ್ಲಿ ಸಂಗ್ರಹಿಸಿದ ನೀರನ್ನು ಬೆಳೆಗೆ ಹಾಯಿಸಲಾಗುತ್ತಿದೆ. ಈ ಮೂಲಕ ಭೂಮಿಗೆ ಬಿತ್ತಿದ ಬೀಜ ಮುಂದೊಂದು ದಿನ ಫಲ ಕೊಡುತ್ತದೆ ಎನ್ನುವ ವಿಶ್ವಾಸ ಹೆಚ್ಚಿದೆ. ಅಷ್ಟೇ ಅಲ್ಲದೆ ಆದಾಯದಲ್ಲೂ ಗಣನೀಯ ಏರಿಕೆ ಕೂಡ ಆಗಿದೆ ಎನ್ನುತ್ತಾರೆ ಪಾಂಡು ಕರ್ಮಳಿ.
ಪಾಂಡು ಹೇಮರೆಡ್ಡಿ ಕರ್ಮಳಿ ಅವರು ಕೃಷಿಹೊಂಡ ನಿರ್ಮಾಣಕ್ಕೂ ಮುನ್ನ ಹೆಸರು, ಗೋದಿ, ಹತ್ತಿ ಹಾಗೂ ಕಡಲಿ ಬೆಳೆಯುತ್ತಿದ್ದರು. ಆದರೆ ಕೃಷಿಹೊಂಡ ನಿರ್ಮಾಣದ ಬಳಿಕ ಮೊದಲಿನ ಬೆಳೆಗಳ ಜೊತೆಗೆ ಗಿಡ್ಡ ಮೆಣಸಿನಕಾಯಿ, ಈರುಳ್ಳಿ ಬೀಜ, ಶೇಂಗಾ ಹಾಗೂ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ.
ದೇಶಪಾಂಡೆ ಫೌಂಡೇಶನ್ ರೈತರ ಕೃಷಿಗೆ ಜೀವಜಲ ನೀಡುತ್ತಿದ್ದರೆ, ಫಾರ್ಮರ್ ಪ್ರೊಡಕ್ಷನ್ ಆರ್ಗನೈಜೇಶನ್‌ನ ಕಲ್ಮೇಶ್ವರ ಸಂಘವು ಸಕಾಲಕ್ಕೆ ಬೀಜ, ಗೊಬ್ಬರ, ಕೃಷಿ ಅಗತ್ಯ ವಸ್ತುಗಳನ್ನು ಒದಗಿಸುತ್ತಿದೆ. ರೈತರ ಶ್ರಮಕ್ಕೆ ಇಂತ ಸಾಥ್ ಸಿಕ್ಕರೆ ದೇಶದ ಬೆನ್ನೆಲುಬು ಮತ್ತಷ್ಟು ಗಟ್ಟಿಯಾಗುತ್ತೆ ಎನ್ನುತ್ತಾರೆ ಪಾಂಡು ಅವರು.
Kshetra Samachara
24/02/2021 07:53 pm