ಹಸಿದಾಗ ಅನ್ನ, ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚೆಂದವೋ?
ಭೂಮಿ ತಾಯಿ ತಂದ ಬೆವರಿನ ಸಿರಿ ಹಂಚಿಕೊಂಡು ತಿನದೇ ಇದ್ರೆ ಏನ್ ಚೆಂದವೋ?
ಈ ಮೇಲಿನ ಮಾತನ್ನ ಕನ್ನಡ ಚಿತ್ರ ಸಂಗೀತದ ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ. ನಿಜಕ್ಕೂ ಸಹಮಾನವರೊಂದಿಗೆ ಸಹನಾಶೀಲರಾಗಿ ಹೇಗೆ ಬದುಕಬೇಕೆಂಬುದನ್ನ ನಮ್ಮ ನಾಡಿನ ಅನ್ನದಾತನನ್ನ ನೋಡಿ ಕಲೀಬೇಕು. ಹಸಿದುಕೊಂಡು ಅನ್ನದಾತನ ಮನೆಗೆ ಯಾರೇ ಬಂದರೂ ಊಟ ಮಾಡಿಸದೇ ವಾಪಸ್ ಕಳುಹಿಸಿದ ನಿದರ್ಶನ ಇತಿಹಾಸದಲ್ಲೇ ಇಲ್ಲ.
ಅಂತಹ ಒಬ್ಬ ಸಹೃದಯಿ ಸಾಮಾನ್ಯ ರೈತ ಇಲ್ಲಿದ್ದಾರೆ. ಇವರು ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದ ಪ್ರವೀಣ್ ಶೆರೆವಾಡ. ಮೂಲತಃ ಕೃಷಿ ಕುಟುಂಬದಿಂದ ಬಂದ ಇವರು ತಮ್ಮ 10 ಎಕರೆ ಜಮೀನಿನಲ್ಲಿ ಕೃಷಿ ಕಾಯಕ ಮಾಡಿಕೊಂಡಿದ್ದಾರೆ. 35ವರ್ಷ ವಯಸ್ಸಿನ ಇವರು ಸುಸಜ್ಜಿತ ಶೆಡ್ ನಿರ್ಮಿಸಿ ಅದರಲ್ಲಿ ಆಡು ಸಾಕಾಣಿಕೆ ಮಾಡ್ತಿದ್ದಾರೆ. ಜೊತೆಗೆ ರೇಷ್ಮೆ ಸಾಕಾಣಿಕೆಯ ಸಾಹಸಕ್ಕೂ ಕೈ ಹಾಕಿದ್ದಾರೆ. ಕೇವಲ ಎಸ್ಸೆಸ್ಸೆಲ್ಸಿ ಓದಿರುವ ಇವರು ವರ್ಷಕ್ಕೆ 4ರಿಂದ 5ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಅನ್ನದಾತ ಪ್ರವೀಣ್ ಶೆರೆವಾಡ ಅವರ ಈ ಯಶಸ್ಸಿನ ಹಿಂದೆ ಟೊಂಕ ಕಟ್ಟಿ ನಿಂತಿದ್ದು ದೇಶಪಾಂಡೆ ಪೌಂಡೇಶನ್. ನಿಜ ಕಣ್ರೀ.. ದೇಶಪಾಂಡೆ ಫೌಂಡೇಶನ್ ನೀರು ಸಿಂಚನ ಯೋಜನೆ ಅಡಿಯಲ್ಲಿ 150 ಬೈ 100 ಅಡಿ ಸುತ್ತಳತೆಯ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಈ ಮೂಲಕ ಒಣ ಬೇಸಾಯ ಬಿಟ್ಟು ಸುಸ್ಥಿರ ಕೃಷಿ ಮಾಡಿ ಪೌಷ್ಟಿಕ ಫಸಲು ಬೆಳೆಯುತ್ತಿದ್ದಾರೆ. ಮಳೆಯಾಶ್ರಿತ ಫಸಲಿಗಿಂತ ಅತ್ಯಧಿಕ ಇಳುವರಿ ಪಡೆಯುತ್ತಿದ್ದಾರೆ.
ದೇಶಪಾಂಡೆ ಫೌಂಡೇಶನ್ ನ ಕೃಷಿ ಹೊಂಡ ನಿರ್ಮಿಸಿಕೊಳ್ಳುವ ಮುನ್ನ ಪ್ರವೀಣ್ ಶೆರೆವಾಡ ಅವರ ವಾರ್ಷಿಕ ಆದಾಯ ಹೆಚ್ಚೇನೂ ಇರಲಿಲ್ಲ. ಹೆಸರು ಬೇಳೆ, ಕಡಲೆ ಜೋಳ ಗೋಧಿ ಹಾಗೂ ಇನ್ನಿತರ ಒಣ ಬೇಸಾಯದ ಬೆಳೆ ಬೆಳೆಯುತ್ತಿದ್ದರು. ಆದ್ರೆ ಕೃಷಿಹೊಂಡ ನಿರ್ಮಿಸಿಕೊಂಡ ನಂತರ ಸಂಪೂರ್ಣ ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ವರ್ಷಕ್ಕೆ 4ರಿಂದ 5ಲಕ್ಷ ಆದಾಯ ಪಡೆದು ಒಬ್ಬ ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. ಕೃಷಿಹೊಂಡದ ನೀರು ಬಳಸಿಕೊಂಡು ಪ್ರವೀಣ್ ಶೆರೆವಾಡ್ ಅವರು ಪಪ್ಪಾಯಿ, ನುಗ್ಗೆಕಾಯಿ, ಉಳ್ಳಾಗಡ್ಡಿ, ರೇಷ್ಮೆ, ಬಿದಿರು ಹಾಗೂ ಆಡು ಸಾಕಾಣಿಕೆ ಮಾಡ್ತಿದ್ದಾರೆ.
ಇದರೊಂದಿಗೆ ಕಲ್ಮೇಶ್ವರ ಸಂಘದ ಫಾರ್ಮರ್ ಪ್ರೊಡ್ಯೂಸಿಂಗ್ ಆರ್ಗನೈಜೇಷನ್ ಗೆ ಉಪಾಧ್ಯಕ್ಷರಾಗಿ ಜವಾಬ್ದಾರಿ ಪ್ರವೀಣ್ ಅವರು ಜವಾಬ್ದಾರಿ ಹೊತ್ತಿದ್ದಾರೆ. ಆ ಮೂಲಕ ತಾಲೂಕಿನ ರೈತರಲ್ಲಿ ಬೀಜ ಗೊಬ್ಬರ ಹಾಗೂ ಕೃಷಿಹೊಂಡದ ಕುರಿತಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಕರಿ ಎತ್ತ ಕಾಳಿಂಗ, ಬಿಳಿ ಎತ್ತ ಮಾನಿಂಗ ಹೊನ್ನ ಬಿತ್ತೇವೋ ಹೊಲಕೆಲ್ಲ..ಹೊನ್ನ ಬಿತ್ತೇವೋ ಹೊಲಕೆಲ್ಲ ಬಸವಣ್ಣ, ಬಂಗಾರದ ಬೆಳಿಯ ಬೆಳೆದೇವೋ ಹೀಗಂತ ನಮ್ಮ ನೆಲದ ಜನಪದಕಾರರು ಅನ್ನದಾತನ ಶ್ರಮ ಸಂಸ್ಕೃತಿಯ ದ್ಯೋತಕವಾಗಿ ಹಾಡಿ ಹೊಗಳಿದ್ದಾರೆ. ಅದರಂತೆ ಪ್ರವೀಣ್ ಶೆರೆವಾಡ ಅವರು ಮಣ್ಣು ನಂಬಿ ದುಡಿಯುತ್ತಿದ್ದಾರೆ.
Kshetra Samachara
04/02/2021 09:56 pm