ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕಾನೂನುಗಳಾದ ಕೃಷಿ ಎಪಿಎಂಸಿ ಹಾಗೂ ವಿದ್ಯುತ್ತ ಕಾಯ್ದೆ ತಿದ್ದುಪಡಿ ವಿರೋಧಿಸಿ
ದೆಹಲಿಯ ಸಿಂಧೂ ಬಾರ್ಡರ್ ನಲ್ಲಿ ಕಳೆದ 25 ದಿನಗಳಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ್, ಉತ್ತರಕಾಂಡ ಸೇರಿದಂತೆ ದೇಶದ
ಅನೇಕ ರಾಜ್ಯದ ಲಕ್ಷಾಂತರ ರೈತರು ನಡೆಸುತ್ತಿರುವ ಹೋರಾಟದಲ್ಲಿ ಕರ್ನಾಟಕ ಕಳಸಾ-ಬಂಡೂರಿ ರೈತ ಹೋರಾಟ ಸಮಿತಿಯ ಮುಖಂಡರು ಬೆಂಬಲ ನೀಡಿದರು.
ಹುಬ್ಬಳ್ಳಿಯ ಮುಖಂಡರಾದ ಬಾಬಾಜಾನ್ ಮುಧೋಳ ಹಾಗೂ ರಾಜಶೇಖರ ಮೆಣಸಿನಕಾಯಿ ಇವರ ನೇತೃತ್ವದಲ್ಲಿ ಡಿ.19 ರಂದು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟದಲ್ಲಿ ಭಾಗವಹಿಸಿ
ಕರಾಳ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿದಲ್ಲದೇ ತಕ್ಷಣ ಹಿಂದೆ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಒಂದು ವೇಳೆ ಕಾನೂನು ಹಿಂಪಡೆಯದೇ ಇದ್ದಲ್ಲಿ ದೇಶದ ರೈತರು ಕೇಂದ್ರ ಸರ್ಕಾರದ ವಿರುದ್ಧ ದಂಗೆ ಏಳಲಿದ್ದಾರೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ. ಶ್ರೀನಿವಾಸ್ ರವರ ನೇತೃತ್ವದಲ್ಲಿ ಕಳೆದ 24 ದಿನಗಳಿಂದ
ಪ್ರತಿಭಟನಾನಿರತ ರೈತರಿಗೆ ದಿನನಿತ್ಯ ಹಗಲು-ರಾತ್ರಿ ದಾಸೋಹ ಸೇವೆಯನ್ನು ಏರ್ಪಡಿಸಿದ್ದು, ಇದರಲ್ಲಿ ಭಾಗವಹಿಸಿ ಯುವ ಕಾಂಗ್ರೆಸ್ಸಿನ ಕಾರ್ಯಕರ್ತರಿಗೆ ಹಾಗೂ ಅಧ್ಯಕ್ಷರಿಗೆ ಅಭಿನಂದಿಸಿದರು.
Kshetra Samachara
21/12/2020 03:42 pm