ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ಮಟ್ಟಹಾಕಲು ಈಗಾಗಲೇ ದೇಶದಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಕೊರೊನಾ ಲಸಿಕೆಗೆ ಅನುಮತಿ ಸಿಕ್ಕಿದೆ. ಈ ಬೆನ್ನಲ್ಲೇ ಲಸಿಕೆ ವಿತರಣೆಗೆ ಸಿದ್ಧತೆ ನಡೆಸಲಾಗಿದ್ದು, ದಿನಾಂಕ ಕೂಡ ನಿಗದಿ ಮಾಡಲಾಗಿದೆ.
ದೇಶಾದ್ಯಂತ ಜನವರಿ 13ರಿಂದಲೇ ಕೊರೊನಾ ಲಸಿಕೆಯನ್ನು ವಿತರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲ ತಿಳಿಸಿದೆ. ಹೀಗಾಗಿ ಆರಂಭದಲ್ಲಿ ಕೊರೊನಾ ವಾರಿಯರ್ಸ್‌ಗೆ ಲಸಿಕೆಯನ್ನು ವಿತರಿಸಲಾಗುತ್ತಿದೆ. ಬಳಿಕ ಹಂತ ಹಂತವಾಗಿ ಎಲ್ಲರಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಈಗಾಗಲೇ ಸಿದ್ಧತೆ ನಡೆಸಿದೆ. ಈ ಕುರಿತು ಡ್ರೈ ರನ್ ಸಹ ನಡೆಸಲಾಗಿದೆ. ಇದೇ ಮಾದರಿಯಲ್ಲಿ ಇದೀಗ ಲಸಿಕೆ ಹಂಚಿಕೆಯಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆಯು, ''ಆರಂಭದಲ್ಲಿ ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗುತ್ತದೆ. ಬಳಿಕ ಹಂತ ಹಂತವಾಗಿ ಕೋವ್ಯಾಕ್ಸಿನ್ ಲಸಿಕೆ ಹಂಚಿಕೆ ಮಾಡಲಾಗುತ್ತದೆ. ದೇಶದ 4 ಕಡೆ ಲಸಿಕೆ ಡಿಪೋ ತೆರೆದರೆ 37 ಕಡೆ ಲಸಿಕೆ ಸಂಗ್ರಹಣಾ ಕೇಂದ್ರ ಸ್ಥಾಪನೆಯಾಗಲಿದೆ. ಪುಣೆಯಿಂದ ವಿಮಾನಗಳ ಮೂಲಕ ಡಿಪೋಗಳಿಗೆ ಲಸಿಕೆ ಪೊರೈಕೆ ಆಗಲಿದೆ. ಅಲ್ಲಿಂದ ವಾಹನಗಳ ಮೂಲಕ ವಿತರಣೆ ಆಗಲಿದೆ. ದೇಶಾದ್ಯಂತ ನಡೆಸಿದ ಡ್ರೈ ರನ್ ಬಳಿಕ ಲಸಿಕೆ ವಿತರಣೆ ದಿನಾಂಕ ನಿಗದಿ ಮಾಡಲಾಗಿದೆ ಎಂದು ತಿಳಿಸಿದೆ.
ಸುಮಾರು 6.5 ಕೋಟಿ ಡೋಸ್‍ಗಳನ್ನು ಸೇರಮ್ ಇನ್‍ಸ್ಟಿಟ್ಯೂಟ್ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಿದೆ. ಬಳಿಕ ಆದ್ಯತೆ ಮೇರೆಗೆ ದೇಶಾದ್ಯಂತೆ ಲಸಿಕೆ ಹಂಚಿಕೆ ಮಾಡಲಾಗುತ್ತದೆ. ಕರ್ನೂಲ್, ಮುಂಬೈ, ಚೆನ್ನೈ, ಕೋಲ್ಕತ್ತಾಗಳಲ್ಲಿ ಒಟ್ಟು ನಾಲ್ಕು ಲಸಿಕೆ ಡಿಪೋಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳ ಮೂಲಕವೇ ಲಸಿಕೆಯನ್ನು ಹಂಚಲು ಆರೋಗ್ಯ ಸಚಿವಾಲಯ ಪ್ಲಾನ್ ಮಾಡಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
PublicNext
05/01/2021 06:01 pm