ಪಶ್ಚಿಮ ಆಫ್ರಿಕಾ: ಕೊರೊನಾ ವೈರಸ್‌ನಿಂದ ತತ್ತರಿಸಿರುವ ಜಗತ್ತನ್ನು ಹೊಸ ವೈರಸ್‌ಗಳು ಚಿಂತೆಗೀಡುಮಾಡುತ್ತಿವೆ. ಆಫ್ರಿಕಾದ ಪುಟ್ಟ ದೇಶ ಘಾನಾದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಎಬೋಲಾ ತರಹದ ರೋಗಲಕ್ಷಣವುಳ್ಳ 'ಮಾರ್ಬರ್ಗ್ ವೈರಸ್' ಪ್ರಕರಣ ಆತಂಕ ಮೂಡಿಸುತ್ತಿದೆ. ಈ ಹೊಸ ವೈರಸ್‌ನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರ ದೃಢಪಡಿಸಿದೆ.
ವೈರಸ್‌ಗೆ ಸಾವಿಗೀಡಾದ ಇಬ್ಬರು ಅತಿಸಾರ, ಜ್ವರ ಮತ್ತು ವಾಂತಿಯಿಂದ ಬಳಲುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರ ಮಾದರಿಗಳನ್ನು ಸಂಗ್ರಹಿಸಿ ಸೆನೆಗಲ್‌ನ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನಂತರ ಮಾರ್ಬರ್ಗ್ ವೈರಸ್ ಎನ್ನುವುದು ಖಾತ್ರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಈ ಸಂಗತಿಯನ್ನು ದೃಢಪಡಿಸಿದೆ.
ಮಾರ್ಬರ್ಗ್ ವೈರಸ್ ಮೊದಲು ಪಶ್ಚಿಮ ಆಫ್ರಿಕಾದ ಜಿನಿಯಲ್ಲಿ ಪತ್ತೆಯಾಗಿತ್ತು. ಕಳೆದ ವರ್ಷ ಜಿನಿಯಲ್ಲಿ ಮೊದಲ ಮಾರ್ಬರ್ಗ್ ಕೇಸ್ ಪತ್ತೆಯಾಗಿತ್ತು. ಆದರೆ ಜಿನಿಯಲ್ಲಿ ಆತಂಕ ಸೃಷ್ಟಿಸಿದ ಮಾರ್ಬರ್ಗ್ ಬಳಿಕ ನಾಪತ್ತೆಯಾಗಿತ್ತು. ಇದಾದ ಬಳಿಕ ಇದೀಗ ಘಾನಾದಲ್ಲಿ ಎರಡು ಕೇಸ್ ಪತ್ತೆಯಾಗಿದೆ. ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಯನ್ನು ಪಾಲಿಸಲಾಗುತ್ತದೆ ಎಂದು ಘಾನಾ ಹೆಲ್ತ್ ಸರ್ವೀಸ್ ಹೇಳಿದೆ.
ಮಾರ್ಬರ್ಗ್ ಎಂದರೇನು?: ಮಾರ್ಬರ್ಗ್ ವೈರಸ್ ಎಬೋಲಾ ಪ್ರಭೇದಕ್ಕೆ ಸೇರಿದ ಸಾಂಕ್ರಾಮಿಕ ರೋಗ. ಇದು ಬಾವಲಿಗಳಿಂದ ಹರಡುತ್ತದೆ. ನಂತರ ಮನುಷ್ಯರಿಗೂ ಹರಡುತ್ತದೆ. ಸೋಂಕಿತ ವ್ಯಕ್ತಿಯ ದೈಹಿಕ ದ್ರವಗಳ ಸಂಪರ್ಕಕ್ಕೆ ಬಂದಾಗ ಅಥವಾ ನಿಕಟ ಸಂಪರ್ಕವನ್ನು ಹೊಂದಿದಾಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆಗಳಿವೆ. ಮಾರಣಾಂತಿಕ ವೈರಸ್ ವ್ಯಕ್ತಿಯಲ್ಲಿ 2 ರಿಂದ 21 ದಿನಗಳವರೆಗೆ ಜೀವಂತವಾಗಿರುತ್ತದೆ.
PublicNext
19/07/2022 10:18 am