ಗದಗ: ಗದಗ ಜಿಲ್ಲೆಯಲ್ಲಿ ಈಗಿನಿಂದಲೇ ಚುನಾವಣೆ ಕಾವು ರಂಗೇರುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ತಂಡದಿಂದ ಉತ್ತರ ಕರ್ನಾಟಕದ 50 ಕ್ಷೇತ್ರಗಳಲ್ಲಿ ಜನ ಸಂಕಲ್ಪ ಯಾತ್ರೆ ನಡೆಯಲಿದೆ.
ಅದರಂತೆ ನಳೀನ್ ಕುಮಾರ್ ಕಟೀಲ್ ಅವರ ತಂಡದ ಕಾರ್ಯಕರ್ತರ ಸಂಕಲ್ಪ ಸಭೆ ಗದಗ ಜಿಲ್ಲೆಯ ಗಜೇಂದ್ರಗಡ ನಗರದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಸ್ವಾಗತಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗಜೇಂದ್ರಗಡ ನಗರ ಸಂಪೂರ್ಣ ಕೇಸರಿಮಯವಾಗಿದೆ.
ನಳೀನ್ ಕುಮಾರ್ ಕಟೀಲ್ ಇಂದು ಹಾಲಕೇರಿ ಅನ್ನದಾನೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ, ಆಶೀರ್ವಾದ ಪಡೆದುಕೊಳ್ಳಲಿದ್ದಾರೆ. ನಂತರ ಶಾಸಕ ಕಳಕಪ್ಪ ಬಂಡಿ ನೇತೃತ್ವದಲ್ಲಿ ಗಜೇಂದ್ರಗಡ ತೋಟದಾರ್ಯ ಶಾಲಾ ಆವರಣದಲ್ಲಿ ಬೂತ್ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಬಿ.ಎಲ್.ಎ- ೨ ಸಭೆ ನಡೆಯಲಿದೆ. ನಂತರ ಶಾಸಕರ ಗೃಹ ಕಚೇರಿ ಆವರಣದಲ್ಲಿ ಪೇಜ್ ಪ್ರಮುಖರ ಸಭೆ, ಜನ ಸಂಘದ ಹಿರಿಯ ಕಾರ್ಯಕರ್ತರ ಭೇಟಿ ಹಾಗೂ ಬಹಿರಂಗ ಸಭೆ ಜರುಗಲಿದೆ.
ಆದ್ದರಿಂದ ಗಜೇಂದ್ರಗಡ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಬ್ಯಾನರ್, ಬಂಟಿಂಗ್ಸ್, ಫ್ಲಕ್ಸ್, ಕಟೌಟ್ಸ್ ಗಳು ರಾರಾಜಿಸುತ್ತಿವೆ. ಈ ಮೂಲಕ ಚುನಾವಣೆಯ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗ್ತಿದೆ. ಒಟ್ನಲ್ಲಿ ಜಿಲ್ಲೆಯ ಕೋಟೆನಾಡು ಕೆಸರಿಮಯವಾಗಿದೆ.
PublicNext
12/10/2022 10:20 am