ಶಿರಹಟ್ಟಿ: ಇಂದಿನ ಕಾಲದಲ್ಲಿ ಮಹಿಳೆಯರ ಸುಸ್ಥಿರ ಬದುಕಿಗೆ ಆಸರೆಯಾಗುವ ಕರಕುಶಲ ತರಬೇತಿಗಳು ಮತ್ತು ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಹಾಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ತ್ರೀ ಶಕ್ತಿ ಭವನ ಸಹಕಾರಿಯಾಗಲಿ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದ್ದಾರೆ.
ಪಟ್ಟಣದ ನವನಗರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂದಾಜು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ತ್ರೀ ಶಕ್ತಿ ಭವನದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸ್ತ್ರೀ ಶಕ್ತಿ ಸಂಘದ ಸದಸ್ಯರು ಈ ಭವನದಲ್ಲಿ ಸಭೆ, ಸಮಾರಂಭ, ಚರ್ಚೆಕೂಟ, ವಿವಿಧ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟಕ್ಕೆ ಅನುಕೂಲ ಮಾಡಿಕೊಳ್ಳುವ ಮೂಲಕ ಭವನವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೇ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಸಾಕಷ್ಟು ಒತ್ತು ನೀಡುತ್ತಿದ್ದು, ಕೌಶಲ್ಯಾಧಾರಿತ ತರಬೇತಿ ಪಡೆದು ಉಜ್ವಲ ಭವಿಷ್ಯ ಕಟ್ಟಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಸ್ತ್ರೀ ಶಕ್ತಿ ಭವನವನ್ನು ಸಂಘದ ಸದಸ್ಯರು ಉತ್ತಮವಾಗಿ ನೋಡಿಕೊಳ್ಳಬೇಕು. ಸದಾ ಸಮಾಜಮುಖಿ ಕಾರ್ಯಗಳನ್ನು ನಡೆಸಬೇಕು. ಭವನದಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿ, ಮಹಿಳೆಯರ ಸಬಲೀಕರಣಕ್ಕೆ ಕಂಕಣಬದ್ಧರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ನೀಲವ್ವ ಹುಬ್ಬಳ್ಳಿ, ಹೊನ್ನಪ್ಪ ಶಿರಹಟ್ಟಿ, ಸಂದೀಪ ಕಪ್ಪತ್ತನವರ, ಜಾನು ಲಮಾಣಿ, ರಾಮಣ್ಣ ಕಂಬಳಿ, ಪರಮೇಶ ಪರಬ, ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಪರಶುರಾಮ ಡೊಂಕಬಳ್ಳಿ, ಗೂಳಪ್ಪ ಕರಿಗಾರ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಸಿಡಿಪಿಒ ಮೃತ್ಯುಂಜಯ್ಯ ಗುಡ್ಡದ್ವಾನೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮರಿಗೌಡ ಸುರುಕೋಡ, ಅಕ್ಬರ ಯಾದಗಿರಿ, ನಂದಾ ಪಲ್ಲೇದ ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
Kshetra Samachara
07/12/2024 09:58 pm