ಗದಗ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕೇಂದ್ರ ಸರ್ಕಾರಿ ನೇಮಕಾತಿ ಆಯೋಗದಿಂದ ಆಗುತ್ತಿರುವ ಬಿ ಮತ್ತು ಸಿ ದರ್ಜೆ ನೌಕರರಲ್ಲಿ ಕನ್ನಡಿಗರ ಹಿತಕಾಯುವಂತೆ ಆಗ್ರಹಿಸಿ ಸೋಮವಾರ ಕರವೇ ತಾಲ್ಲೂಕು ಘಟಕದ ವತಿಯಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಅಧ್ಯಕ್ಷ ಬಸವರಾಜ ವಡವಿ, ಪ್ರಸ್ತುತ ಒಕ್ಕೂಟ ಸರ್ಕಾರವು, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಖಾಲಿಯಿರುವ 20,000ಕ್ಕೂ ಹೆಚ್ಚು ’ಬಿ’ ಮತ್ತು ’ಸಿ’ ದರ್ಜೆಯ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಇದರ ಎಲ್ಲಾ ಪ್ರಕ್ರಿಯೆಯು ಸೆ.17ರಿಂದ ಪ್ರಾರಂಭವಾಗಿದ್ದು, ಸದರಿ ನೇಮಕಾತಿಯ ಅರ್ಜಿ ಸಲ್ಲಿಸುವಿಕೆಯಿಂದ ಹಿಡಿದು ಎಲ್ಲಾ ಹಂತಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳು ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಡೆಯಲಿವೆ. ಇದು ಕನ್ನಡಿಗರ ಉದ್ಯೋಗಾವಕಾಶಗಳನ್ನು ಕಸಿಯುವಂಥಾ ತಾರತಮ್ಯದ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕ್ರಿಯೇಯಿಂದ ನಾಗರಿಕರಿಗೆ ಉಂಟಾಗುವ ಭಾಷಾಸಂಬಂಧಿತ ಅನಾನುಕೂಲಗಳು ಉಲ್ಬಣಗೊಳ್ಳುವ ಸಾಧ್ಯತೆಗಳು ಹೆಚ್ಚಲಿವೆ. ನಾಡಿನ ಜನತೆಯ ಹಿತದೃಷ್ಟಿಯಿಂದ ದೇಶಾದ್ಯಂತ ನಡೆಯುವ ನೇಮಕಾತಿಯು ಈ ಹಿಂದಿನಂತೆ ವಲಯವಾರು ನಡೆಸುವಂತಾಗಬೇಕು. ಅಂದಾಗ ಮಾತ್ರ ಕನ್ನಡಿಗರು ಅರ್ಜಿ ಸಲ್ಲಿಸಲು ಮತ್ತು ನೇಮಕವಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವೇಂದ್ರ ಶಿಂಧೆ, ಇಂತಿಯಾಜ ಪಟೆಗಾರ, ಅನ್ವರ ಬರದ್ವಾಡ, ಚನವೀರ ಡಂಬಳ, ಸಮೀರ ಅತ್ತಾರ, ಹಸನಲಿ ಮುಜಾವರ, ಮೌಲಾಲಿ ಮಂಡಲ, ನೂರಸಾಬ ಮುಳಗುಂದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Kshetra Samachara
10/10/2022 07:21 pm