ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಗರ್ ಹುಕುಂ ಸಾಗುವಳಿದಾರರಿಂದ ನಾಳೆ ಬೃಹತ್ ಪಾದಯಾತ್ರೆ:

ಗದಗ : ಬಗರ್ ಹುಕುಂ ಸಾಗುವಳಿದಾರರ ಹಕ್ಕೊತ್ತಾಯಕ್ಕಾಗಿ ಸೋಮುವಾರ ಕಪ್ಪತ್ತಗುಡ್ಡದಿಂದ ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ತಹಶೀಲ್ದಾರ ಕಾರ್ಯಾಲಯದವರೆಗೆ ಬೃಹತ್ ಪಾದಯಾತ್ರೆ ಹಾಗೂ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.

ಸ್ಥಳೀಯ ಹರಿಪುರದಲ್ಲಿನ ನಿರೀಕ್ಷಣಾ ಮಂದಿರದಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡದೆ ಸದಾ ಸತಾಯಿಸುತ್ತಿದೆ. ತಲೆತಲಾಂತರದಿಂದ ಉಳುಮೆ ಮಾಡುತ್ತಾ ಬದುಕು ಕಟ್ಟಿಕೊಂಡು ಬಂದ ರೈತರನ್ನು ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸುತ್ತಿದ್ದಾರೆ. ಕಪ್ಪತ್ತಗುಡ್ಡದ ಅಂಚಿನಲ್ಲಿ ಅಕ್ರಮವಾಗಿ ಮರಳು ದಂಧೆ, ಕಲ್ಲು ಗಣಿಗಾರಿಕೆ, ಅಕ್ರಮ ಗಿಡ ಮರಗಳ ಮಾರಣ ಹೋಮ ನಡೆಯುತ್ತಿದ್ದರೂ ನಿಯಂತ್ರಣ ಮಾಡದ ಅಧಿಕಾರಿಗಳು ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿರುವುದು ಖಂಡನೀಯ.

ಈ ಕಪ್ಪತ್ತಗುಡ್ಡದ ವ್ಯಾಪ್ತಿಯಲ್ಲಿ ಲಂಬಾಣಿ, ಬೋವಿ, ವಾಲ್ಮೀಕಿ, ಹಿಂದುಳಿದ ರೈತ ಸಮುದಾಯದವರು 40-50 ವರ್ಷಗಳಿಂದ ಭೂಮಿ ಸಾಗುವಳಿ ಮಾಡುತ್ತಿದ್ದಾರೆ. ಮುಂಡರಗಿ ತಾಲ್ಲೂಕಿನ ಕೆಲೂರ ಗ್ರಾಮದ ನಿರ್ಮಲಾ ರಾಮನಗೌಡ ಪಾಟೀಲ ಎಂಬ ರೈತ ಮಹಿಳೆಯ ಸಾವಿಗೆ ಕಾರಣವಾದ ಇಲಾಖೆ ಅವರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕ ಮಹಾಸಭಾ, ಅರಣ್ಯ ಹಕ್ಕು ಹೋರಾಟ ಸಮಿತಿ, ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿವೆ.ಕಪ್ಪತ್ತಗುಡ್ಡದಿಂದ ಶಿರಹಟ್ಟಿ ತಹಶೀಲ್ದಾರ ಕಚೇರಿವರೆಗೆ ಬೃಹತ್ ಪಾದಯಾತ್ರೆ ಹಾಗೂ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಈ ವೇಳೆ ತಾಪಂ ಮಾಜಿ ಸದಸ್ಯ ದೇವಪ್ಪ ಲಮಾಣಿ, ಎನ್.ಟಿ. ಪೂಜಾರ, ಶ್ರೀನಿವಾಸ ಬಾರಬಾರ, ಈರಣ್ಣ ಚವ್ಹಾಣ, ಹನುಮಂತ ತಳವಾರ, ಮಂಜುನಾಥ ಅರೆಪಲ್ಲಿ, ಪ್ರಕಾಶ ಕಲ್ಯಾಣಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

11/09/2022 06:00 pm

Cinque Terre

5.76 K

Cinque Terre

0