ಬೆಳಗಾವಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಮೃತ ಘಳಿಗೆಯಲ್ಲಿ ದೇಶದ ಅತೀ ಎತ್ತರದ ಧ್ವಜಸ್ತಂಭಗಳಲ್ಲಿ ಒಂದಾಗಿರುವ ಇಲ್ಲಿನ ಕೋಟೆಕೆರೆ ಆವರಣದ 110 ಮೀಟರ್ ಎತ್ತರದ ಧ್ವಜಸ್ತಂಭದಲ್ಲಿ 9600 ಚದರ ಅಡಿಯ ಬೃಹತ್ ತ್ರಿವರ್ಣ ಧ್ವಜವು ಜಿಟಿಜಿಟಿ ಮಳೆಯ ನಡುವೆಯೂ ನೀಲಿ ಬಾನಂಗಳಲ್ಲಿ ಹಾರಿತು. ಈ ದೃಶ್ಯಾವಳಿ ಕಣ್ಣು ತುಂಬಿಕೊಳ್ಳಲು ಇಡೀ ಕುಂದಾನಗರಿಯ ಸಾವಿರಾರು ಜನ ಸಾಕ್ಷಿಯಾದರು.
110 ಮೀಟರ್ ಎತ್ತರದ ಬೃಹತ್ ಧ್ವಜಸ್ತಂಭದಲ್ಲಿ 36.60×24.40(120×90 ಅಡಿ=9600 ಚದರ ಅಡಿ) ಅಳತೆಯ ತ್ರಿವರ್ಣ ಧ್ವಜವು ಆಕಾಶದಲ್ಲಿ ಗರಿ ಬಿಚ್ಚಿ ಪಟಪಟನೇ ಹಾರಾಡುತ್ತಿದ್ದಾಗ ಹಿನ್ನೆಲೆಯಲ್ಲಿ ವಂದೇ ಮಾತರಂ ಹಾಡು ಕೇಳಿ ರೋಮಾಂಚನಗೊಂಡ ನೆರೆದ ಜನರು ಭಾರತ ಮಾತಾಕೀ ಜೈ ಎಂದು ಜಯಘೋಷ ಹಾಕಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆಯ ವತಿಯಿಂದ "ಹರ್ ಘರ್ ತಿರಂಗಾ" ಅಭಿಯಾನದ ಅಂಗವಾಗಿ ಕೋಟೆಕೆರೆ ಆವರಣದ ಬೃಹತ್ ಧ್ವಜಸ್ತಂಭದಲ್ಲಿ ಬೃಹತ್ ಧ್ವಜಾರೋಹಣ ನಡೆಯಿತು. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಧ್ವಜಾರೋಹಣ ನೆರವೇರಿಸಿದರು.
PublicNext
13/08/2022 05:33 pm