ಹೈದರಾಬಾದ್: ಮದುವೆಯಾದ ಒಂದೇ ತಿಂಗಳಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಕತ್ತು ಸೀಳಿದ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹನುಮಕೊಂಡ ಜಿಲ್ಲೆಯ ಪಸರಗೊಂಡ ಗ್ರಾಮದ ದಿಶೆಟ್ಟಿ ರಾಜು (30) ಹಾಗೂ ಮಲ್ಕಪೇಟ ಗ್ರಾಮಕ್ಕೆ ಸೇರಿದ ಅರ್ಚನಾ ಒಂದು ತಿಂಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ತನಗೆ ಈ ಮದುವೆ ಇಷ್ಟ ಇಲ್ಲ ಎಂದು ಯುವತಿ ಬಹಿರಂಗವಾಗಿಯೇ ಕುಟುಂಬಸ್ಥರಿಗೆ ಹೇಳಿದ್ದರು ಎನ್ನಲಾಗಿದೆ. ಆದರೆ ಕುಟುಂಬವರು ಆಕೆಗೆ ತಿಳಿ ಹೇಳುವ ಕೆಲಸ ಮಾಡಿದ್ದರಂತೆ. ಈ ನಡುವೆ ಹೊಸದಾಗಿ ಮದುವೆಯಾದ ಜೋಡಿಗಳಿಗೆ ರಾಜ್ಯ ಸರ್ಕಾರ ಕಲ್ಯಾಣ ಲಕ್ಷ್ಮಿ ಯೋಜನೆ ಅಡಿ ನೀಡುವ ಸೌಲಭ್ಯಗಳನ್ನು ಪಡೆಲು ಅರ್ಜಿ ಹಾಕಬೇಕೆಂದು ಆಕೆ ತವರಿಗೆ ತೆರಳಿದ್ದಳು. ಇತ್ತ ಏಪ್ರಿಲ್ 23ರಂದು ಪತಿಗೆ ಕರೆ ಮಾಡಿದ್ದ ಆಕೆ ಬಂದ ಕೆಲಸ ಆಗಿದೆ ಕರೆದುಕೊಂಡು ಹೋಗುವಂತೆ ಕರೆ ಮಾಡಿದ್ದ ಕಾರಣ, ರಾಜು ಪತ್ನಿಯನ್ನು ಮನೆಗೆ ವಾಪಸ್ ಕರೆತಂದಿದ್ದ. ಮನೆಗೆ ಬಂದ ಅರ್ಚನಾ ಭಾನುವಾರ ತಡರಾತ್ರಿ ನಿದ್ದೆ ಮಾಡುತ್ತಿದ್ದ ಪತಿಯ ಕೊಲೆಗೆ ಯತ್ನಿಸಿ, ಬ್ಲೇಡ್ನಿಂದ ಆತನ ಕತ್ತು ಸೀಳಿದ್ದಾಳೆ ಎನ್ನಲಾಗಿದೆ.
ಈ ವೇಳೆ ಮನೆಯಿಂದ ಹೊರ ಬಂದ ರಾಜು ಸ್ಥಳೀಯರ ಸಹಾಯ ಪಡೆದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ನಡುವೆಯೂ ಅರ್ಚನಾ ಪತಿಯ ಮೇಲೆ ಹಲ್ಲೆಗೆ ಮುಂದಾಗಿದ್ದಳು ಎನ್ನಲಾಗಿದೆ. ಕುಟುಂಬಸ್ಥರು ನೀಡಿರುವ ದೂರಿನ ಅನ್ವಯ ಪತ್ನಿ ಅರ್ಚನಾಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
PublicNext
26/04/2022 03:09 pm