ದಾವಣಗೆರೆ: ಅಂತರ್ ರಾಜ್ಯ ಮೂವರು ಕಳ್ಳರನ್ನು ಹರಿಹರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಮೂವರು ಆರೋಪಿಗಳಿಂದ 22.92 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು
ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಂಡರಾಪುರದ ಸಚಿನ್ ರಾಜ್ ಮಾನೆ, ಸನ್ನಿ ಮಹೇಶ್ ಕುಮಾರ್ ತನೇಜ್ ಹಾಗೂ ಸಾಗರ್ ಕೋಳೆ ಸೆರೆ ಸಿಕ್ಕ ಕಳ್ಳರು. ಹರಿಹರ ಪಟ್ಟಣದಲ್ಲಿ ಎರಡು ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಈ ವೇಳೆ ಈ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದರು. ವಿಚಾರಣೆ ನಡೆಸಿದಾಗ ಪೊಲೀಸರಿಗೆ ಶಾಕ್ ಕಾದಿತ್ತು.
ನಿಪ್ಪಾಣಿ, ಸಂಕೇಶ್ವರ, ದಾವಣಗೆರೆ ಜಿಲ್ಲೆಯ ಹರಿಹರ, ಹಾವೇರಿ, ಖಾನಾಪುರ, ರಾಣೇಬೆನ್ನೂರು, ಖಾನಾಪುರ ಸೇರಿದಂತೆ ಸುಮಾರು 10 ಕಡೆಗಳಲ್ಲಿ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಆರೋಪಿಗಳಿಂದ 16.84 ಲಕ್ಷ ರೂ. ಮೌಲ್ಯದ 421 ಗ್ರಾಂ ಚಿನ್ನಾಭರಣ, 2.16 ಲಕ್ಷ ರೂಪಾಯಿ ಮೌಲ್ಯದ 3600 ಗ್ರಾಂ ಬೆಳ್ಳಿ, 1 ಲಕ್ಷ ರೂಪಾಯಿ ನಗದು, ಏಳು ಲಕ್ಷ ರೂಪಾಯಿ ಮೌಲ್ಯದ ಫಾಸಿಲ್ ಕಂಪೆನಿಯ ವಾಚ್ ಹಾಗೂ 2.85 ಲಕ್ಷ ರೂಪಾಯಿ ಮೌಲ್ಯದ
ಕಾರು ವಶಕ್ಕೆ ಪಡೆಯಲಾಗಿದೆ.
ಮೊದಲ ಬಾರಿಗೆ ಸಿಕ್ಕಿ ಬಿದ್ದ ಕಳ್ಳರು !
ಹಲವು ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದ ಖದೀಮರು ಎಲ್ಲಿಯೂ ಸಿಕ್ಕಿ ಬಿದ್ದಿರಲಿಲ್ಲ. ಒಂದು ಜಿಲ್ಲೆಯಲ್ಲಿ ಕಳ್ಳತನ ಮಾಡಿದರೆ ಮತ್ತೆ ಅಲ್ಲಿಗೆ ಹೋಗುತ್ತಿರಲಿಲ್ಲ. ಬೇರೆ ಜಿಲ್ಲೆಗಳಿಗೆ ಹೋಗುತ್ತಿದ್ದರು. ಹಾಗಾಗಿ, ಇವರು ಎಲ್ಲಿಯೂ
ಸಿಕ್ಕಿ ಬಿದ್ದಿದ್ದರು. ಇದೇ ಮೊದಲ ಬಾರಿಗೆ ಹರಿಹರ ಪೊಲೀಸರ ಚಾಕಚಕ್ಯತೆಯಿಂದ ಖದೀಮರು ಸಿಕ್ಕಿ ಬಿದ್ದಿದ್ದಾರೆ ಎಂದು ಎಸ್ಪಿ ಸಿ. ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.
PublicNext
29/01/2022 12:22 pm