ಲಕ್ನೋ: ಕಳೆದೆರಡು ದಿನಗಳಿಂದ ಕಣ್ಮರೆಯಾಗಿದ್ದ ಆರು ವರ್ಷದ ಬಾಲಕಿ ಪಕ್ಕದ ಮನೆಯ ಟ್ರಂಕ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಹಾಪುರ್ ಪಟ್ಟಣದಲ್ಲಿ ನಡೆದಿದೆ.
ಬಾಲಕಿ ಗುರುವಾರ ಸಂಜೆ 5 30ರ ಸಮಯದಲ್ಲಿ ತಂದೆಯಿಂದ 5 ರೂ. ಪಡೆದು ತಿಂಡಿ ತಿನ್ನಲು ಮನೆಯಿಂದ ಹೊರ ಬಂದಿದ್ದಳು. ಬಳಿಕ ಬಹಳ ಸಮಯ ಕಳೆದರೂ ಬಾಲಕಿ ಮನೆಗೆ ಮರಳಿಲ್ಲ. ರಾತ್ರಿ ಎಷ್ಟು ಹೊತ್ತಾದರೂ ಬಾಲಕಿ ಮನೆಗೆ ಹಿಂದಿರುಗದಿದ್ದಾಗ ಗಾಬರಿಗೊಂಡ ಪೋಷಕರು ಎಲ್ಲೆಡೆ ಹುಡುಕಿದ್ದಾರೆ. ಆದರೆ ಬಾಲಕಿ ಸುಳಿವು ಮಾತ್ರ ಸಿಕ್ಕಿಲ್ಲ. ಬಳಿಕ ಶುಕ್ರವಾರ ಬೆಳಗ್ಗೆಯೇ ಪೊಲೀಸರಿಗೆ ಈ ಸಂಬಂಧ ದೂರು ಸಲ್ಲಿಸಿದ್ದಾರೆ.
ಬಾಲಕಿ ನಾಪತ್ತೆಯಾದ ಸಂಕಟದಲ್ಲಿ ಪೋಷಕರು ಇರುವಾಗಲೇ ಅವರ ನೆರೆ ಮನೆಯಿಂದ ಇಂದು ಕೆಟ್ಟ ದುರ್ವಾಸನೆ ಬರಲು ಆರಂಭಿಸಿದೆ. ಅಕ್ಕ ಪಕ್ಕದ ಮನೆಯವರೆಲ್ಲಾ ಮಾಲೀಕನ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದರಿಂದ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶವದ ಕೊಳೆತ ವಾಸನೆ ಹಿನ್ನೆಲೆಯಲ್ಲಿ ಅನುಮಾನಗೊಂಡು ಬಾಲಕಿ ಪೋಷಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಬಾಲಕಿ ದೇಹ ಟ್ರಂಕ್‌ನಲ್ಲಿ ಇದ್ದುದ್ದು ತಿಳಿಯುತ್ತಿದ್ದಂತೆ ನೆರೆ ಮನೆಯ ಜನರು ಮಾಲೀಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಮಾಲೀಕನ ರಕ್ಷಣೆ ಮಾಡಿ ಬಂಧಿಸಿದ್ದಾರೆ.
ಗುರುವಾರ ಸಂಜೆ ಬಾಲಕಿಯನ್ನು ಮಾಲೀಕ ಬೈಕ್ನಲ್ಲಿ ಕರೆದುಕೊಂಡು ಹೋಗಿ, ಬಳಿಕ ಮನೆಗೆ ಕರೆದು ಹೋಗಿರುವ ದೃಶ್ಯಗಳು ಮನೆಯ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಬಾಲಕಿ ಮೇಲೆ ಈತ ಅತ್ಯಾಚಾರ ನಡೆಸಿ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸರು ಈ ಬಗ್ಗೆ ಮರಣೋತ್ತರ ಪರೀಕ್ಷೆ ಬಳಿಕ ಸ್ಪಷ್ಟವಾಗಲಿದೆ ಎಂದಿದ್ದಾರೆ.
PublicNext
04/12/2021 06:56 pm