ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಪ್ರೇಮ ನಿವೇದನೆ ಮಾಡೋದು ಇಂದು ಕಾಮನ್ ಆಗಿಬಿಟ್ಟಿದೆ. ಆದ್ರೆ ಇಲ್ಲೊಂದು ಜೋಡಿ ಯಾವಾಗ್ಲು ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್, ಚಾಟಿಂಗ್ ಮಾಡ್ತಾ ಇದ್ರು, ತಮ್ಮ ಫೀಲಿಂಗ್ಸ್‌ನ ರೀಲ್ಸ್ ಮೂಲಕ ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿದ್ರು. ಆದ್ರೆ, ಅವರಿಬ್ಬರ ಮಧ್ಯೆ ಅದೇನಾಯ್ತೋ ಏನೋ ಗೊತ್ತಿಲ್ಲ, ನಿನ್ನೆ ಸಂಜೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಕೆಲ ನಿಮಿಷದಲ್ಲೇ ಪ್ರಿಯಕರನೂ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಡೆದಿದೆ.
17ರ ಹರೆಯದ ರಕ್ಷಿತಾ ನಿನ್ನೆ ಸಂಜೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಸಂದ್ರದ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹುಡುಗಿ ಸಾವಿನ ಸುದ್ದಿ ತಿಳಿದ ಪ್ರಿಯಕರ 21 ವರ್ಷದ ಮನೋಜ್ ಕೂಡ ಕೆಲವೇ ನಿಮಿಷದಲ್ಲಿ ರಾಜಾನಕುಂಟೆ ಠಾಣೆ ವ್ಯಾಪ್ತಿಯ ಹನಿಯೂರು ಗ್ರಾಮದಲ್ಲಿ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿದ್ದಾನೆ!
ಮದುವೆಗೆ ಕುಟುಂಬದವರೂ ಒಪ್ಪಿದ್ದರು: ಇವರಿಬ್ಬರ ಪ್ರೇಮ ಪ್ರಕರಣ ಅರಿತ ಎರಡೂ ಕುಟುಂಬದವರು ಮದುವೆ ವಿಚಾರ ಸಹ ಚರ್ಚೆ ನಡೆಸಿದ್ದು, ವಿದ್ಯಾಭ್ಯಾಸ ಮುಗಿದ ಬಳಿಕ ಮದುವೆ ಯೋಚನೆ ಮಾಡೋಣ ಎಂದಿದ್ದರಂತೆ. ಈ ವಿಷಯದಲ್ಲೇ ಇಬ್ಬರ ನಡುವೆ ಮನಸ್ತಾಪ ಉಂಟಾಗಿರ ಬಹುದು ಎನ್ನಲಾಗುತ್ತಿದೆ.
ನಿನ್ನೆ ಸಂಜೆ ರಕ್ಷಿತಾ ಪೋಷಕರು ಸಂಬಂಧಿಯೊಬ್ಬರ ಮದುವೆಗೆ ತೆರಳಿದ್ದಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಯುವತಿ ಕೆಲ ಹೊತ್ತಿನ ನಂತರ ಮನೆ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡ ನಂತರ ಆಕೆಯ ಮೊಬೈಲ್‌ಗೆ ಮನೋಜ್ ಕರೆ ಮಾಡಿದ್ದು, ತೆಗೆಯದಿದ್ದ ಕಾರಣ, ರಕ್ಷಿತಾ ಬಾಡಿಗೆಗೆ ಇದ್ದ ಮನೆ ಮಾಲೀಕರಿಗೆ ಕರೆ ಮಾಡಿದ್ನಂತೆ. ಆಗ ರಕ್ಷಿತಾಳ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಮನೋಜ್ ಸಹ ನೇಣಿಗೆ ಕೊರಳೊಡ್ಡಿದ್ದಾನೆ.
PublicNext
23/11/2021 05:55 pm