ಬಂಟ್ವಾಳ: ತನ್ನನ್ನು ಕಾರಿನಲ್ಲಿ ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಬಂಟ್ವಾಳದ ಅಪ್ರಾಪ್ತ ಬಾಲಕಿಯೊಬ್ಬಳು ನೀಡಿದ ದೂರಿನಂತೆ ತನಿಖೆ ನಡೆಸಿದ ಬಂಟ್ವಾಳ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಫೇಸ್‌ಬುಕ್ ಮೂಲಕ ಬಾಲಕಿಗೆ ಪರಿಚಿತನಾದ ಯುವಕ, ತನ್ನ ಸ್ನೇಹಿತರೊಂದಿಗೆ ಅತ್ಯಾಚಾರ ಎಸಗಿರುವುದು ಇಡೀ ದಿನ ಬಂಟ್ವಾಳ ಪೊಲೀಸರು ನಡೆಸಿದ ತನಿಖೆಯಿಂದ ತಿಳಿದುಬಂದಿದ್ದು, ಘಟನೆ ಮಂಗಳೂರಿನಲ್ಲಿ ನಡೆದಿದೆ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಎಸ್‌ಪಿ ಋಷಿಕೇಶ್ ಭಗವಾನ್ ಸೋನಾವಣೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ತಂಡ ಆರೋಪಿಗಳಾದ ಕಾಪು ನಿವಾಸಿ ಕೆ. ಎಸ್ ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್ ಹಾಗೂ ಇದಾಯತ್ತುಲ್ಲ ಎಂಬ ನಾಲ್ವರನ್ನು ಶನಿವಾರ ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸಿದಾಗ ಬಾಲಕಿಗೆ ಮೊದಲೇ ಪರಿಚಿತರಾಗಿದ್ದ ಆರೋಪಿಗಳು ಆಕೆಯನ್ನು ಪುಸಲಾಯಿಸಿ ಮಂಗಳೂರಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ ವಿಚಾರ ಬೆಳಕಿಗೆ ಬಂದಿದೆ.
ದೂರನ್ನು ಆಧರಿಸಿ ತನಿಖೆಯನ್ನು ಆರಂಭಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದರು. ಬಾಲಕಿ ಆರಂಭದಲ್ಲಿ ನೀಡಿದ ದೂರಿನಂತೆ ತನ್ನನ್ನು ಬಂಟ್ವಾಳದಲ್ಲಿ ಕಾರಿನಲ್ಲಿ ಅಪಹರಿಸಿ ಅತ್ಯಾಚಾರ ಎಸಗಿದ್ದಾಗಿ ತಿಳಿಸಿದ್ದಳು. ಬಳಿಕ ತನಿಖೆ ವೇಳೆ ಆಕೆಯ ಪರಿಚಿತರೇ ಈ ಕೃತ್ಯ ಎಸಗಿದ್ದಾಗಿ ಗೊತ್ತಾಗಿದ್ದು, ಆ ಆಧಾರದಲ್ಲಿ ವಶಕ್ಕೆ ಪಡೆದವರನ್ನು ವಿಚಾರಣೆ ನಡೆಸಿದಾಗ ಘಟನೆಯ ವಿವರ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕ್ರ.116/2021 ಕಲಂ: 366(ಎ), 376 (ಡಿ) 506 ಐಪಿಸಿ ಮತ್ತು ಕಲಂ 04,06 ಪೋಕ್ಸೊ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
PublicNext
09/10/2021 09:58 pm