ಬೆಂಗಳೂರು: ಸಂಜಯ್ ನಗರದ ಬಸ್ ನಿಲ್ದಾಣ ಬಳಿ ತಲೆಗೆ ಗುಂಡು ಹಾರಿಸಿಕೊಂಡ ಕಾಲೇಜು ವಿದ್ಯಾರ್ಥಿಯ ಸಾವು ಪ್ರಕರಣ ಪ್ರಮುಖ ತಿರುವು ಪಡೆದುಕೊಂಡಿದೆ.
ತಂದೆಯ ಪಿಸ್ತೂಲ್ನಿಂದಲೇ ವಿದ್ಯಾರ್ಥಿ ರಾಹುಲ್ ಭಂಡಾರಿ ಗುಂಡು ಹಾರಿಸಿಕೊಂಡಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ. ವಿಪರ್ಯಾಸ ಎಂದರೆ 500 ರೂ. ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ತಂದೆಯ ಜೊತೆ ಮಗ ಜಗಳ ಮಾಡಿಕೊಂಡಿದ್ದನಂತೆ. ಇದೇ ಕಾರಣಕ್ಕಾಗಿ ಆತ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಈ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ರಾಹುಲ್ ಭಂಡಾರಿ ನಿನ್ನೆ ತಂದೆ ಬಳಿ 500 ರೂಪಾಯಿ ಕೇಳಿದ್ದನಂತೆ. ಕೊಡಲು ನಿರಾಕರಿಸಿದ ತಂದೆ ಕಾರಣವಿಲ್ಲದೆ ಹಣ ನೀಡುವುದಿಲ್ಲ ಎಂದು ಗದರಿಸಿದ್ದರು. ಇದರಿಂದ ಬೇಸರಗೊಂಡ ರಾಹುಲ್ ತಂದೆ ಹೆಸರಿನಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಇಂದು ಮುಂಜಾನೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಮಿಲಿಟರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಾಹುಲ್ ಪ್ರತಿದಿನ 3 ಗಂಟೆಗೆ ಎದ್ದು ಓದುತ್ತಿದ್ದ. ಇದರಂತೆ ಇಂದು ಬೆಳಗ್ಗೆ ಎದ್ದು ಕೆಲ ಹೊತ್ತು ಓದಿದ ಬಳಿಕ ಮನೆಯಿಂದ 4 ಗಂಟೆ ವೇಳೆ ವಾಕಿಂಗ್ ಮಾಡಲು ಹೊರ ಬಂದಿದ್ದಾನೆ. ಸುಮಾರು 5 ಗಂಟೆ ವೇಳೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
PublicNext
17/09/2021 04:24 pm