ಅಥಣಿ: ಅಕ್ರಮವಾಗಿ ಹಾಲಿನ ಪುಡಿ ಸಾಗಿಸುತ್ತಿದ್ದ ಖದೀಮರನ್ನು ಸಾರ್ವಜನಿಕರೇ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಅಥಣಿ ತಾಲೂಕಿನ ಖಿಳೇಗಾವ ಗ್ರಾಮದಲ್ಲಿ ನಡೆದಿದೆ.
ಚೀಲ ಗಟ್ಟಲೆ ಅಂಗನವಾಡಿಯ ಕ್ಷೀರಭಾಗ್ಯ ಹಾಲಿನ ಪುಡಿಗಳನ್ನು ತಮ್ಮ ಹಣದಾಹಕ್ಕೆ ಸಿಬ್ಬಂದಿಗಳೇ ಮಾರಿದ್ದು,ಮಕ್ಕಳ ಬಾಯಿಗೆ ಕನ್ನ ಹಾಕಿ ಅಕ್ರಮ ಎಸಗಿದ್ದಾರೆ.
ಅಂಗನವಾಡಿ ಮಕ್ಕಳಿಗೆ ಪೌಷ್ಟಿಕತೆಯ ಕೊರತೆ ನೀಗಿಸಲು ಸರ್ಕಾರ ರೂಪಿಸಿರುವ ಕ್ಷೀರಭಾಗ್ಯ ಯೋಜನೆಯಲ್ಲಿ ಹಾಲಿನ ಪುಡಿ ನೀಡಲಾಗುತ್ತಿತ್ತು ಭ್ರಷ್ಟ ಅಂಗನವಾಡಿ ಸಿಬ್ಬಂದಿಗಳಿಂದ ಯೋಜನೆ ಹಳ್ಳ ಹಿಡಿದಿದ್ದಲ್ಲದೇ ಈ ರೀತಿ ಮಕ್ಕಳ ಆಹಾರವನ್ನು ದುರುಪಯೋಗ ಪಡಿಸಿಕೊಂಡಿರುವುದು ಖಂಡನೀಯವಾಗಿದೆ.
ಅನಂತಪೂರ ಗ್ರಾಮದ ವ್ಯಕ್ತಿ ಅಕ್ರಮವಾಗಿ ಹಾಲಿನ ಪುಡಿ ಸಾಗಿಸುತ್ತಿದ್ದ , ಈತ ನಿರಂತರವಾಗಿ ತನ್ನ ಅಕ್ರಮ ಕೆಲಸ ಮುಂದುವರೆಸಿಕೊಂಡು ಹೋಗುತ್ತಿದ್ದ.ಈ ಬಾರಿ ಗ್ರಾಮಸ್ಥರೆಲ್ಲಾ ಸೇರಿ ಹಾಲಿನ ಪುಡಿಯನ್ನು ವಶಪಡಿಸಿಕೊಂಡು ಆತನ ಚಳಿಬಿಡಿಸಿದ್ದಾರೆ.
ಇಷ್ಟೆಲ್ಲಾ ಆದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏನು ಮಾಡುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕರದ್ದು,ಇಂತಹ ಅಕ್ರಮವೆಸಗುವ ಸಿಬ್ಬಂದಿ ವಜಾ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.ಹಾಗೂ ಅಕ್ರಮ ಸಾಗಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಅಂಗನವಾಡಿಯ ನಡೆಗೆ ಗ್ರಾಮಸ್ಥರು ಕೆಂಡಾಮಂಡಲವಾಗಿದ್ದಾರೆ.
PublicNext
16/09/2021 11:41 am