ಮಂಡ್ಯ: ಕಾಡುಹಂದಿ ಎಂದು ತಿಳಿದು ಹಾರಿಸಿದ ಗುಂಡು ಯುವಕನನ್ನು ಬಲಿ ಪಡೆದುಕೊಂಡ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮಾದೇಶ್ (25) ಎಂಬ ಯುವಕನಿಗೆ ಗುಂಡೇಟು ತಗುಲಿದೆ. ಮಾದೇಶನ ಹೊಟ್ಟೆ ಭಾಗಕ್ಕೆ ಗುಂಡು ತಗುಲಿ ಗಂಭೀರ ಗಾಯವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರು ಜಿಲ್ಲೆಯ 6 ಮಂದಿ ಯುವಕರ ತಂಡ ಬೇಟೆಗೆ ಬಂದಿತ್ತು. ನಾಡಬಂದೂಕು ಬಳಸಿ ಕಾಡುಹಂದಿ ಬೇಟೆಗೆ ಈ ತಂಡ ಬಂದಿತ್ತು. ಮಾದೇಶ ಅವರ ಕಬ್ಬಿನ ಗದ್ದೆಯಲ್ಲಿ ಹಂದಿಗಾಗಿ ತಂಡ ಶೋಧ ನಡೆಸುತ್ತಿತ್ತು. ಈ ಸಮಯದಲ್ಲಿ ಅದೇ ಗದ್ದೆಯ ಬದುವಿನಲ್ಲಿ ಮಾದೇಶ ಹುಲ್ಲು ಕೊಯ್ಯುತ್ತಿದ್ದ. ಕಬ್ಬಿನ ಗರಿಗಳು ಅಲುಗಾಡುತ್ತಿದ್ದನ್ನು ಗಮನಿಸಿದ ತಂಡ ಹಂದಿ ಇರಬಹುದು ಎಂದುಕೊಂಡು ಫೈರಿಂಗ್ ಮಾಡಿದೆ. ಇದು ಮಾದೇಶನಿಗೆ ತಗುಲಿದೆ.
ಆರು ಮಂದಿ ಯುವಕರ ಪೈಕಿ ಮೂವರನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
09/09/2021 09:03 am