ಜೈಪುರ್: ರಾಜಸ್ಥಾನದ ಬುಂಡಿಯಲ್ಲಿ ವಿಷಪೂರಿತ ಹಾವೊಂದು ಒಂದೇ ಕುಟುಂಬದ ನಾಲ್ವರಿಗೆ ಕಚ್ಚಿರುವ ಪರಿಣಾಮ ಮಹಿಳೆ ಸಾವನ್ನಪ್ಪಿದ್ದು, ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ.
ನಿರ್ಮಲಾ ಮೃತ ತಾಯಿ. ಮಕ್ಕಳಾದ ಪ್ರದೀಪ್, ಸಮೀಕ್ಷಾ ಹಾಗೂ ಯಶ್ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಕೊಡಲಾಗುತ್ತಿದೆ. ನಿರ್ಮಲಾ ಅವರು ತನ್ನ ಮೂವರು ಮಕ್ಕಳೊಂದಿಗೆ ನಿನ್ನೆ (ಬುಧವಾರ) ರಾತ್ರಿ ಒಂದೇ ರೂಂನಲ್ಲಿ ಮಲಗಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಎಲ್ಲರಿಗೂ ಹಾವು ಕಚ್ಚಿದೆ. ಹಾವು ಕಚ್ಚಿದೆ ಎಂಬುದು ಯಾರಿಗೂ ಗೊತ್ತಾಗಿಲ್ಲ. ಆದರೆ ಕೆಲ ನಿಮಿಷಗಳ ಬಳಿಕ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದು, ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಈ ವೇಳೆ ವಿಷ ಆಹಾರ ಸೇವಿಸಿರಬಹುದು ಎಂದು ಶಂಕಿಸಿ, ಚಿಕಿತ್ಸೆ ನೀಡಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಈ ವೇಳೆ ಹಾವು ಕಡಿತದ ಬಗ್ಗೆ ಅವರಿಗೆ ಪರೀಕ್ಷೆ ನಡೆಸಲಾಗಿದ್ದು, ಅದು ದೃಢಗೊಂಡಿದೆ. ಚಿಕಿತ್ಸೆ ಫಲಕಾರಿಯಾಗದೆ ನಿರ್ಮಲಾ ಸಾವನ್ನಪ್ಪಿದ್ದಾರೆ.
ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಮಕ್ಕಳನ್ನು ಬುಂಡಿಯಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
PublicNext
12/08/2021 04:28 pm