ಬೆಂಗಳೂರು: ಕೋಟ್ಯಂತರ ಬೆಲೆ ಬಾಳುವ ತಿಮಿಂಗಿಲದ ವಾಂತಿ (Ambergris) ಸೇರಿದಂತೆ ಪುರಾತನ ವಸ್ತುಗಳನ್ನು ಅಕ್ರಮವಾಗಿ ಮಾರಾಟಕ್ಕೆ ಯತ್ನಿಸಿದ್ದ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ.
ಮಜೀಬ್ ಪಾಶಾ (48), ಮಹಮ್ಮದ್ ಮುನ್ನಾ (45), ಗುಲಾಬ್ ಚಂದ್ (40) ಸಂತೋಷ್ (31), ಜಗನ್ನಾಥಾಚಾರ್ (52) ಬಂಧಿತ ಆರೋಪಿಗಳಾಗಿದ್ದಾರೆ. ಬಾಗಲಗುಂಟೆ ಬಳಿಯ ಕಟ್ಟಡವೊಂದರಲ್ಲಿ ಪುರಾತನ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳ ಬಳಿ 80 ಕೆಜಿ ಆ್ಯಂಬರ್ ಗ್ರಿಸ್ ಪತ್ತೆಯಾಗಿದೆ. ಅಲ್ಲದೇ ಬ್ರಿಟಿಷ್ ಈಸ್ಟ್ ಇಂಡಿಯಾ ಕಾಲದ ರೆಡ್ ಮರ್ಕ್ಯೂರಿ ಬಾಟಲ್, ಸ್ಟೀಮ್ ಫ್ಯಾನ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಏನಿದು ತಿಮಿಂಗಿಲದ ವಾಂತಿ?:
ತಿಮಿಂಗಿಲ ಸೇವಿಸಿದ ಆಹಾರ ಜೀರ್ಣವಾಗದೇ ಹೊರಕ್ಕೆ ಹಾಕಿದಾಗ ದ್ರವ ಮಿಶ್ರಿತ ಘನ ವಸ್ತುವಿಗೆ ಅಂಬೆಗ್ರಿಸ್ ಅಥವಾ ತಿಮಿಂಗಿಲ ವಾಂತಿ ಎಂದು ಕರೆಯುತ್ತಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ತಿಮಿಂಗಿಲದ ವಾಂತಿ ಬೆಲೆ ೧ ಕೋಟಿ ರೂ.ಗೂ ಅಧಿಕವಾಗಿದೆ.
ತಜ್ಞರ ಪ್ರಕಾರ, ಬಲು ಅಪರೂಪಕ್ಕೆ ಒಂದು ಬಾರಿ ಮಾತ್ರ ತಿಮಿಂಗಿಲಗಳು ವಾಂತಿ ಮಾಡಿಕೊಳ್ಳುತ್ತದೆ. ಒಂದು ತಿಮಿಂಗಿಲ ಒಂದು ಕೆಜಿ ಇಂದ ಹತ್ತು ಕೆಜಿಗೂ ಹೆಚ್ಚು ವಾಂತಿ ಮಾಡಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಇದ್ದಾಗಲೇ ಜೀರ್ಣಾಂಗದಲ್ಲಿ ಇವು ರಾಸಾಯನಿಕ ಕ್ರಿಯೆಗೆ ಒಳಗಾಗುವುದರಿಂದ ಇದರ ವಾಂತಿ ಸುಗಂಧ ಭರಿತವಾಗಿರುತ್ತದೆ. ಮೊದಲು ಇದನ್ನು ಸುಟ್ಟಾಗ ವ್ಯಾಕ್ಸ್‌ನಂತೆ ಕರಗಿ ಕೆಟ್ಟವಾಸನೆ ಬರುತ್ತದೆ. ಆದರೆ ನಂತರ ಸುಂಗಂಧ ಭರಿತವಾಗಿರುತ್ತದೆ ಎನ್ನಲಾಗಿದೆ.
PublicNext
10/08/2021 10:50 am