ಜಾರ್ಖಂಡ್ ರಾಜ್ಯದ ಧನಬಾದ್ ನ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾದ ಉತ್ತಮ್ ಆನಂದ್ ರವರಿಗೆ ದುಷ್ಕರ್ಮಿಗಳು ಆಟೋದಿಂದ ಗುದ್ದಿ ಸಾಯಿಸಿದ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆಟೋ ಗುದ್ದಿದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ.
ಉತ್ತಮ್ ಆನಂದ್ ರವರು ಬುಧವಾರ ಬೆಳಿಗ್ಗೆ 5 ಗಂಟೆಯ ಸಮಯದಲ್ಲಿ ಜಾಗಿಂಗ್ ಮಾಡುತ್ತಿದ್ದರು. ಅವರನ್ನೇ ಗುರಿಯಾಗಿಸಿಕೊಂಡು ಬಂದ ಆಟೋವೊಂದು ಹಿಂದಿನಿಂದ ಗುದ್ದಿದೆ ಆ ವೇಳೆ ಅವರು ಕುಸಿದುಬಿಳುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಇನ್ನು ಸಿಸಿಕ್ಯಾಮರಾ ದೃಶ್ಯಾವಳಿಗಳು ದೊರೆತ ನಂತರ ಇದು ಪೂರ್ವನಿಯೋಜಿತ ಹತ್ಯೆ ಎಂಬುದು ಸಾಬೀತಾಗಿದೆ. ನ್ಯಾಯಾಂಗದ ಮೇಲಿನ ಕ್ರೂರ ಹಲ್ಲೆ ಎಂದು ಕರೆದಿರುವ ವಕೀಲರೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ.
ನ್ಯಾಯಾಧೀಶರನ್ನು ಕೊಂದ ಆಟೋ ಯಾರದೆಂಬುದು ಇನ್ನು ಪತ್ತೆಯಾಗಿಲ್ಲ. ಜಾಗಿಂಗ್ ಹೋದವರು 7 ಗಂಟೆಯಾದರೂ ಮನೆಗೆ ಬಾರದಿದ್ದಾಗ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸ್ ಹುಡುಕಾಟದಲ್ಲಿ ಅವರು ಆಸ್ಪತ್ರೆಯಲ್ಲಿ ಸಾವನಪ್ಪಿರುವುದು ಪತ್ತೆಯಾಗಿದೆ.
ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಉನ್ನತ ಮಟ್ಟದ ತನಿಖೆಗೆ ಒತ್ತಡ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
29/07/2021 01:59 pm