ಹೈದರಾಬಾದ್‌ನ ದಿಶಾ ಗ್ಯಾಂಗ್ ರೇಪ್ ಪ್ರಕರಣ ಇಡೀ ದೇಶದ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಕಾಮುಕರನ್ನ ಎನ್‌ಕೌಂಟರ್ ಮಾಡಲಾಗಿತ್ತು. ಹೈದರಾಬಾದ್ ಪೊಲೀಸರ ಈ ನಡೆ ಕಾಮುಕರಿಗೆ ಒಳ್ಳೆಯ ನಿದರ್ಶನ ಆಗಬಹುದು ಎನ್ನಲಾಗಿತ್ತು. ಆದ್ರೆ, ದಿಶಾ ಪ್ರಕರಣ ಜನಮಾನಸದಿಂದ ಮರೆಯಾಗುವ ಮೊದಲೇ ಅದೇ ಹೈದರಾಬಾದ್‌ನಲ್ಲಿ ಮತ್ತೊಂದು ಅಂತದ್ದೇ ಘಟನೆ ನಡೆದಿದೆ.
ಘಟ್ಕೇಸರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ವಿಕೃತ ಕಾಮುಕರು ಗ್ಯಾಂಗ್ ರೇಪ್ ಮಾಡಿದ್ದಾರೆ. ಮೆಡ್ಚಲ್‌ನ ಕಾಲೇಜು ವಿದ್ಯಾರ್ಥಿನಿ ನಿನ್ನೆ ಸಂಜೆ ಕಾಲೇಜು ಮುಗಿಸಿ ಕಾಲೇಜ್ ಬಸ್‌ನಲ್ಲೇ ಬಂದಿಳಿದಿದ್ದಳು. ಮನೆಗೆ ತೆರಳಲು ಆಟೋ ಹತ್ತಿದ್ದಳು. ಆದ್ರೆ, ಮನೆಗೆ ಕರೆದೊಯ್ಯಬೇಕಿದ್ದ ಆಟೋ ಚಾಲಕ ವಿದ್ಯಾರ್ಥಿನಿಯನ್ನು ಓಮ್ನಿಗೆ ಶಿಫ್ಟ್ ಮಾಡಿ ತನ್ನ ಮೂವರು ಸಂಗಡಿಗರ ಜೊತೆಗೆ ಯಾನಂಪೇಟೆಯ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ರಾಕ್ಷಸೀ ಕೃತ್ಯ ಎಸಗಿದ್ದಾರೆ.
ಮಾನಭಂಗ ಮಾಡಿದ ಕಾಮುಕರು ತಮ್ಮ ಕೃತ್ಯ ಮುಗಿದ ಮೇಲೆ ಯುವತಿಯನ್ನು ಬೆತ್ತಲಾಗಿಸಿ ಬಡಿಗೆ ಹಾಗೂ ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ. ನಂತರ ಅತ್ಯಾಚಾರ ಎಸಗಿದ ಅದೇ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಬಿಟ್ಟು ಹೋಗಿದ್ದಾರೆ. ಸ್ಥಳೀಯರ ನೆರವಿನಿಂದ ಪೊಲೀಸ್ ಠಾಣೆಗೆ ಹೋದ ಯುವತಿ ತನ್ನ ಮೇಲೆ ನಡೆದ ಪೈಶಾಚಿಕ ಕೃತ್ಯದ ಬಗ್ಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ೧೦ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆಗೆ ಇಳಿದಿದ್ದಾರೆ.
PublicNext
11/02/2021 09:32 am