ಲಕ್ನೋ : ಲಿಕ್ಕರ್ ಮಾಫಿಯಾ ಕಿಂಗ್ಪಿನ್ ಗೆ ವಾರೆಂಟ್ ನೀಡಲು ಪೊಲೀಸ್ ತಂಡವೊಂದು ಉತ್ತರ ಪ್ರದೇಶದ ಕಾಸ್ ಗಂಜ್ ಜಿಲ್ಲೆಯ ಗ್ರಾಮವೊಂದಕ್ಕೆ ತೆರಳಿತ್ತು. ಈ ವೇಳೆ ದುಷ್ಕರ್ಮಿಗಳು ಕಾನ್ಸ್ ಟೇಬಲ್ ಹತ್ಯೆ ಮಾಡಿದ್ದು, ಸಬ್ ಇನ್ಸ್ ಪೆಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಕಾಸ್ ಗಂಜ್ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸೊಂಕರ್ ಮಾಹಿತಿ ನೀಡಿದ್ದಾರೆ.
ಸದ್ಯ ಪ್ರಕರಣದ ಪ್ರಮುಖ ಆರೋಪಿಯನ್ನು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಲಾಗಿದೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮನೋಜ್ ತಿಳಿಸಿದ್ದಾರೆ. ಕಾನ್ಸ್ಟೇಬಲ್ ದೇವೇಂದ್ರ ಮೃತಪಟ್ಟಿದ್ದು, ಎಸ್ಐ ಅಶೋಕ್ ಕುಮಾರ್ಗೆ ಗಂಭೀರ ಗಾಯವಾಗಿದೆ. ಮೂಲಗಳ ಪ್ರಕಾರ ಗೂಂಡಾಗಳು ಪೇದೆಯನ್ನು ಹಿಡಿದು ಬಟ್ಟೆಯನ್ನು ಕಿತ್ತೆಸೆದು ದೊಣ್ಣೆ ಮತ್ತು ಶಸ್ತ್ರಾಸ್ತ್ರಾಗಳಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆನ್ನಲಾಗಿದೆ.
ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಿಎಂ ಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಮೃತ ಕಾನ್ಸ್ ಟೇಬಲ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದು, ಗಾಯಾಳು ಎಸ್ ಐಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.
PublicNext
10/02/2021 11:43 am