ಕಲಬುರ್ಗಿ : ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಮೂರು ವರ್ಷ ಬಾಲಕಿ ಸಾವು ಪ್ರಕರಣ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ಜೈಲಿನಲ್ಲಿ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಮತ್ತು ಸಂಬಂಧಿಕರು ಜೈಲಿನ ಪಿಎಸ್ ಐ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ.
ರಸ್ತೆಯಲ್ಲಿ ಮಗುವಿನ ಶವ ಇಟ್ಟು ಆಹೋರಾತ್ರಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ಜೇವರ್ಗಿ ತಾಲೂಕಿನ ಜೈನಾಪುರದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಸೋತ ಅಭ್ಯರ್ಥಿಗಳ ಮೇಲೆ ಹಲ್ಲೆ ಎಸಗಿದ ಪ್ರಕರಣ ವಿಕೋಪಕ್ಕೆ ಹೋಗಿತ್ತು.
ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದರು.
ಈ ವೇಳೆ ತಾಯಂದಿರ ಜೊತೆ ಕರೆದೊಯ್ಯಲಾದ ಮೂವರು ಮಕ್ಕಳ ಪೈಕಿ ಮೂರು ವರ್ಷದ ಭಾರತಿ ಎಂಬ ಮಗು ಸಾವನಪ್ಪಿದೆ.
ಇದು ಪೋಷಕರ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ವಿವಾದಕ್ಕೆ ಕಾರಣವಾಗಿದೆ.
ಮಗುವಿನ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಜೈನಾಪುರ ಗ್ರಾಮಸ್ಥರು ಮತ್ತು ಕುಟುಂಬದ ಸದಸ್ಯರು ಬಾಲಕಿಯ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಕಲಬುರ್ಗಿಯ ಎಸ್.ಪಿ. ಕಚೇರಿಗೆ ಶವ ಒಯ್ಯಲು ಯತ್ನಿಸಿದಾಗ ಪೊಲೀಸರು ಅದಕ್ಕೆ ಅವಕಾಶ ನೀಡಿಲ್ಲ.
ಹೀಗಾಗಿ ಪೊಲೀಸ್ ಭವನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಜಿಮ್ಸ್ ಆಸ್ಪತ್ರೆ ಬಳಿ ರಸ್ತೆಯ ಮೇಲೆ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ದೊಡ್ಡವರನ್ನು ಬಂಧಿಸಿದ ವೇಳೆ ಮಕ್ಕಳನ್ನೂ ಕರೆದೊಯ್ಯಲಾಗಿದೆ. ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ಮನಬಂದಂತೆ ಹಲ್ಲೆ ಮಾಡಲಾಗಿದೆ.
ಈ ವೇಳೆ ಮಗುವಿಗೂ ಪೆಟ್ಟು ಬಿದ್ದಿದ್ದು, ಆಕೆ ಕೇಂದ್ರ ಕಾರಾಗೃಹದಲ್ಲಿ ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
PublicNext
04/01/2021 08:36 am