ವಿಜಯಪುರ: ಆಂಧ್ರ ಪ್ರದೇಶದ ಶ್ರೀಶೈಲದಲ್ಲಿ ಗಲಾಟೆ ವಿಚಾರವಾಗಿ ಶ್ರೀಶೈಲ ಜಗದ್ಗುರು ಡಾ. ಶ್ರೀ ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆ ರಾತ್ರಿ ಕರ್ನಾಟಕದ ಓರ್ವ ಭಕ್ತ ಹಾಗೂ ಸ್ಥಳಿಯ ಹೊಟೇಲ್ ನಡೆಸುತ್ತಿದ್ದ ವ್ಯಕ್ತಿ ನಡುವೆ ಜಗಳವಾಗಿದೆ. ಇದೇ ಜಗಳ ಎರಡು ಸಮುದಾಯಗಳ ನಡುವೆ ಹಬ್ಬಿ ಗಲಾಟೆಯಾಗಿದೆ. ಕರ್ನಾಟಕದ ವ್ಯಕ್ತಿ ಮೇಲೆ ಸ್ಥಳೀಯ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಕರ್ನಾಟಕದ ವ್ಯಕ್ತಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಗಾಯಾಳು ಕರ್ನಾಟಕದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಸುದ್ದಿ ಹರಡಿದೆ. ಇದೇ ಸುದ್ದಿ ಹರಡಿರುವ ಕಾರಣ ಇಲ್ಲಿ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ನಾವೇ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಎಲ್ಲರಿಗೂ ಸಮಾಧಾನ ಮಾಡಿದ್ದೇವೆ ಎಂದು ಜಗದ್ಗುರುಗಳು ಹೇಳಿದ್ದಾರೆ.
ಶ್ರೀಶೈಲದಲ್ಲಿ ಕರ್ನಾಟಕದ ಭಕ್ತರ ಮೇಲೆ ಹಲ್ಲೆ ಮಾಡಲಾಗುತ್ತಿದೆ ಎಂದು ಸುದ್ದಿ ಹರಡಿದೆ. ಇದು ವಾಸ್ತವ ಸ್ಥಿತಿಯಲ್ಲ. ಇಲ್ಲಿ ಪರಿಸ್ಥಿತಿ ಸಹಜವಾಗಿದೆ. ನಿನ್ನೆ ನಡೆದ ಗಲಾಟೆ ಇಂದು ಹತೋಟಿಗೆ ಬಂದಿದೆ. ಕರ್ನಾಟಕದ ಭಕ್ತರೆಲ್ಲ ಇಲ್ಲಿ ಸುರಕ್ಷಿತವಾಗಿದ್ದಾರೆ. ಕನ್ನಡಿಗರಿಗೆ ಇಲ್ಲಿ ಯಾವುದೇ ತೊಂದರೆ ಜೀವಭಯ ಇಲ್ಲ. ನಿನ್ನೆಯ ಗಲಾಟೆಯಲ್ಲಿ ಹಲ್ಲೆಗೊಳಗಾದ ಕರ್ನಾಟಕದ ವ್ಯಕ್ತಿ ಮೃತಪಟ್ಟಿಲ್ಲ. ತಲೆಗೆ ಪೆಟ್ಟಾಗಿರೋ ಕಾರಣ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂದು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದ್ದಾರೆ.
PublicNext
31/03/2022 05:22 pm