ಗದಗ: ಗದಗ ಜಿಲ್ಲೆಯಲ್ಲಿ ನಡೆದಿದ್ದ ಆರ್‌ಟಿಓ ಏಜೆಂಟ್‌ನ ಕೊಲೆ ಪ್ರಕರಣವನ್ನ ಮುಂಡರಗಿ ಪೊಲೀಸರು ಭೇದಿಸಿದ್ದಾರೆ. ಈ ಕುರಿತು ಗದಗ ಜಿಲ್ಲಾ ಎಸ್ಪಿ ಶಿವಪ್ರಕಾಶ ದೇವರಾಜು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಕಳೆದ ಆಗಸ್ಟ್ 24ರಂದು ಸಂಜೆ ಮುಂಡರಗಿ ತಾಲೂಕಿನ ಜಂಗ್ಲಿಶಿರೂರು-ಡ.ಸ ರಾಮೇನಹಳ್ಳಿ ಗ್ರಾಮದ ರಸ್ತೆಯಲ್ಲಿ ಗದಗನ ಗಂಗಿಮಡಿ ನಿವಾಸಿ ಆರ್‌ಟಿಓ ಏಜೆಂಟ್ ಮಾರುತಿ ರಾಮಣ್ಣ ಅಂಕಲಗಿ (35) ಎಂಬಾತನ ಕೊಲೆಯಾಗಿತ್ತು. ಈ ಕುರಿತು ಮೃತನ ತಂದೆ ರಾಮಣ್ಣ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಡ.ಸ.ರಾಮೇನಹಳ್ಳಿ ಗ್ರಾಮದ ಮುತ್ತಪ್ಪ ಹನುಮಪ್ಪ ಬೆಟಗೇರಿ (30)ಎನ್ನುವ ಕೊಲೆ ಆರೋಪಿಯನ್ನ ಬಂಧಿಸಿದ್ದಾರೆ. ಕೊಲೆ ಪ್ರಕರಣ ಭೇದಿಸಲು ಎಸ್ಪಿ ಶಿವಪ್ರಕಾಶ್ ದೇವರಾಜು, ನರಗುಂದ ವಿಭಾಗದ ಡಿವೈಎಸ್ಪಿ ವಾಯ್.ಎಸ್ ಏಗನಗೌಡರ ಅವರ ಮಾರ್ಗದರ್ಶನದಲ್ಲಿ ಮುಂಡರಗಿ ಸಿಪಿಐ ವೀರಣ್ಣ ಹಳ್ಳಿ ನೇತೃತ್ವದಲ್ಲಿ ಸಿಬ್ಬಂದಿಯಾದ ಮಹೇಶ್ ಹೂಗಾರ, ಮಹೇಶ್ ಗೊಳಗೊಳಕಿ, ಶರಣು ನಾಗೇಂದ್ರಗಡ, ಮಂಜು ಮಾದರ ಹಾಗೂ ಜೆ.ಐ ಬಚ್ಚೇರಿ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು .
ಕೊಲೆಗೆ ಹಣಕಾಸಿನ ವ್ಯವಹಾರ ಕಾರಣವಾಗಿದ್ದು, ಮೃತ ಮಾರುತಿ, ಆರೋಪಿ ಮುತ್ತುಗೆ 1.60 ಲಕ್ಷ ರೂ.ಹಣ ಕೊಡಬೇಕಿತ್ತು. ಪದೇ ಪದೇ ಕೇಳಿದರೂ ಕೊಲೆಯಾದ ಮಾರುತಿ ಹಣ ಕೊಟ್ಟಿರಲಿಲ್ಲ. ಹೀಗಾಗಿ ಕೊಲೆ ನಡೆದಿದೆ ಎಂದು ಎಸ್ಪಿ ಹೇಳಿದ್ದಾರೆ. ಇನ್ನು ಕೊಲೆ ನಡೆದ ದಿನ ಮೃತ ಮಾರುತಿ ಕಪ್ಪತಗುಡ್ಡ ನೋಡಲು ಹೋಗುವ ಪ್ಲ್ಯಾನ್ ಮಾಡಿಕೊಂಡಿದ್ದ. ಆದರೆ ಮುತ್ತು, ಮಾರುತಿಯನ್ನು ತನ್ನ ಜಮೀನಿಗೆ ಕರೆದುಕೊಂಡು ಹೋಗಿ ಅಲ್ಲಿ ಇಬ್ಬರೂ ಮದ್ಯ ಸೇವಿಸಿದ್ದಾರೆ. ಆನಂತರ ನಡೆದ ಹಣಕಾಸಿನ ವ್ಯವಹಾರದ ಬಾಯಿ ಮಾತಿನ ಜಗಳ, ಮಾರುತಿ ಕೊಲೆಯಲ್ಲಿ ಅಂತ್ಯವಾಗಿದೆ ಎಸ್‌ಪಿ ಹೇಳಿದ್ದಾರೆ.
PublicNext
01/09/2022 04:44 pm