ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಜನರನ್ನು ಬಂಧಿಸಿರುವುದಾಗಿ ಶಿವಮೊಗ್ಗ ಎಸ್.ಪಿ. ಲಕ್ಷ್ಮೀ ಪ್ರಸಾದ್ ಹೇಳಿದ್ದಾರೆ.
ಫೆ.23 ರ ಸಂಜೆ ಇಬ್ಬರು ಆರೋಪಿಗಳನ್ನು ಬಂಧಿಸುವ ಮೂಲಕ ಒಟ್ಟು ಇದುವರೆಗೆ 8 ಜನರನ್ನು ಬಂಧಿಸಿದ್ದೇವೆ. ಆರೋಪಿಗಳಾದ ನದೀಂ ಹಾಗೂ ಖಾಸೀಫ್ ಮನೆಯವರು ಆರೋಪವನ್ನು ಅಲ್ಲಗೆಳೆಯುತ್ತಿದ್ದಾರೆ. ಆದರೆ ಸಾಕ್ಷಿ ಇರುವುದಕ್ಕೆ ಅವರನ್ನು ಬಂಧಿಸಿದ್ದೇವೆ. ಅವರೆಲ್ಲರ ವಿಚಾರಣೆ ನಡೆಯುತ್ತಿದೆ. ಆರೋಪಿಗಳನ್ನು ಇಂದು ಪೊಲೀಸ್ ಕಸ್ಟಡಿಗೆ ವಿಚಾರಣೆಗೆ ತೆಗೆದುಕೊಳ್ಳಲಾಗುತ್ತದೆ ಎಂದರು.
ಹರ್ಷನ ಮೊಬೈಲ್ ಈವರೆಗೂ ಪತ್ತೆಯಾಗಿಲ್ಲ. ಸದ್ಯ ಮೊಬೈಲ್ ಹುಡುಕುತ್ತಿದ್ದೇವೆ. ಹರ್ಷನ ವಾಟ್ಸಪ್ ಚೆಕ್ ಮಾಡಲು, ವಾಟ್ಸಪ್ ಕಂಪನಿಗೂ ಮಾಹಿತಿ ನೀಡಿದ್ದೇವೆ. ಯಾವ ಯಾವ ಕರೆ ಬಂದಿವೆಯೋ ಲಿಸ್ಟ್ ನೀಡಲು ತಿಳಿಸಿದ್ದೇವೆ. ಜೊತೆಗೆ ಹರ್ಷನ ಸ್ನೇಹಿತರನ್ನು ಕರೆಸಿ, ವಿಚಾರಣೆ ನಡೆಸಿದ್ದೇವೆ ಎಂದರು.
ಸದ್ಯ ಹರ್ಷನ ಕುಟುಂಬಸ್ಥರ ಹೇಳಿಕೆ ಪಡೆಯುತ್ತೇವೆ ಅವರು ಚೇತರಿಸಿಕೊಂಡ ಬಳಿಕ ಖುದ್ದು ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗುತ್ತದೆ.
ಪ್ರಸ್ತುತ ಶಿವಮೊಗ್ಗ ಶಾಂತವಾಗಿದೆ. ಶನಿವಾರ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಇದೆ. ಕಳೆದ 24 ಗಂಟೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಇದೇ ವೇಳೆ ನನ್ನ ವರ್ಗಾವಣೆ ಬಗ್ಗೆ ಊಹಾಪೋಹಗಳನ್ನು ಕೇಳಿದ್ದೇವೆ ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಎಂದು ಸ್ಪಷ್ಟನೆ ನೀಡಿದ್ದಾರೆ.
PublicNext
24/02/2022 08:05 pm