ಗದಗ: ಜನ್ಮ ಕೊಟ್ಟ ತಂದೆಯೇ ಮಗುವಿನ ಜೀವ ತೆಗೆದ ಪ್ರಕಣಕ್ಕೆ ಸಂಬಂಧಿಸಿದಂತೆ ತಂದೆಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ರೋಣ ತಾಲೂಕಿನ ಹುಲ್ಲೂರ ಗ್ರಾಮದ ಪ್ರಶಾಂತಗೌಡ ಪಾಟೀಲ್ ಮರಣದಂಡನೆ ಶಿಕ್ಷೆಗೆ ಗುರಿಯಾದ ಪಾಪಿ ತಂದೆ . ಈತ ತನ್ನದೇ ಒಂದೂವರೆ ವರ್ಷದ ಮಗುವನ್ನು ಕತ್ತು ಹಿಸುಕಿ, ಸುಟ್ಟು ಹಾಕಿ ಕೊಲೆ ಮಾಡಿದ್ದ.
ಪ್ರಶಾಂತಗೌಡ ಪಾಟೀಲ್ ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಆಕೆ ಗರ್ಭಿಣಿ ಆಗುತ್ತಿದ್ದಂತೆ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡುತ್ತಿದ್ದ. ನಿತ್ಯ ಕಿರುಕುಳದಿಂದ ನೊಂದ ಪತ್ನಿ ಮಹಿಳಾ ಸಾಂತ್ವನ ಕೇಂದ್ರ ಮೊರೆ ಹೋಗಿದ್ದಳು. ಅಲ್ಲಿ ಗಂಡ ಹೆಂಡತಿಗೆ ಬುದ್ದಿ ಹೇಳಿ ಮಗು-ಪತ್ನಿಯನ್ನು ಆತನ ಜತೆಗೆ ಕಳಿಸಿದ್ದರು.
ಕೆಲವು ತಿಂಗಳ ನಂತರ ಸಾಂತ್ವನ ಕೇಂದ್ರ ಕೇಸ್ ಹಿಂಪಡೆಯುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ನೊಂದ ಪತ್ನಿ ಮಗುವಿಗೆ ಜೀವನಾಂಶ ಕೊಡಿಸುವಂತೆ ಕೋರ್ಟ್ ಮೊರೆ ಹೋಗಿದ್ದಳು. ಜೀವನಾಂಶ ಕೇಳಿದ್ದಕ್ಕೆ ಸಿಟ್ಟಾಗಿದ್ದ ಪ್ರಶಾಂತಗೌಡ, ಮಗುವನ್ನು 2015ರ ಏಪ್ರಿಲ್ 6ರಂದು ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ಗುಡ್ಡದಲ್ಲಿ ಕೊಲೆ ಮಾಡಿದ್ದ. ಮಗುವಿನ ವಯಸ್ಸು ಒಂದೂವರೆ ವರ್ಷ.
ಮಗು ಕೊಲೆ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಗು ಕೊಂದದ್ದು ತಂದೆಯೇ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಜಶೇಖರ ವಿ.ಪಾಟೀಲ್ ಅವರು ಅಪರಾಧಿಗೆ ಮರಣ ದಂಡನೆ ವಿಧಿಸಿ ಆದೇಶಿಸಿದ್ದಾರೆ.
PublicNext
19/02/2021 03:32 pm