ಮುಂಬೈ : ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ ಕಪ್ಪುಹಣ ಕಾಯ್ದೆಯಡಿ ವಿಚಾರಣೆ ನಡೆಸುವಂತೆ ಕೋರಿ ನೀಡಿರುವ ಶೋಕಾಸ್ ನೋಟಿಸ್ ಮೇಲೆ ನವೆಂಬರ್ 17ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಬಾಂಬೆ ಹೈಕೋರ್ಟ್ ಸೋಮವಾರ ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.
ಎರಡು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ₹ 814 ಕೋಟಿಗೂ ಹೆಚ್ಚು ಮೌಲ್ಯದ ಬಹಿರಂಗಪಡಿಸದ ಹಣದ ಮೇಲಿನ ₹ 420 ಕೋಟಿ ತೆರಿಗೆ ವಂಚನೆ ಆರೋಪದ ಮೇಲೆ 2022ರ ಆಗಸ್ಟ್ 8 ರಂದು ಅನಿಲ್ ಅಂಬಾನಿ ಅವರಿಗೆ ಐಟಿ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಅನಿಲ್ ಅಂಬಾನಿ ವಿರುದ್ಧ ವಂಚನೆ ಆರೋಪ ಹೊರಿಸಿರುವ ಇಲಾಖೆ ಅವರು 'ಉದ್ದೇಶಪೂರ್ವಕವಾಗಿ' ತಮ್ಮ ವಿದೇಶಿ ಬ್ಯಾಂಕ್ ಖಾತೆಯ ವಿವರಗಳು ಮತ್ತು ಹಣಕಾಸಿನ ವ್ಯವಹಾರಗಳನ್ನು ಭಾರತೀಯ ತೆರಿಗೆ ಅಧಿಕಾರಿಗಳಿಗೆ ಬಹಿರಂಗಪಡಿಸಲಿಲ್ಲ ಎಂದಿದೆ.
ಇಲಾಖೆಯ ಸೂಚನೆಯಂತೆ, ಅಂಬಾನಿ ವಿರುದ್ಧ 2015 ರ ಕಪ್ಪು ಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು) ತೆರಿಗೆ ಕಾಯ್ದೆಯ ಸೆಕ್ಷನ್ 50 ಮತ್ತು 51 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸ ಬಹುದು. ಈ ಕ್ರಮ ದಂಡದೊಂದಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. 2015ರಲ್ಲಿ ಕಪ್ಪುಹಣ ಕಾಯಿದೆಯನ್ನು ಜಾರಿಗೊಳಿಸಲಾಗಿದ್ದು, ಆರೋಪಿಸಲಾಗಿರುವ ವ್ಯವಹಾರ 2006-2007 ಮತ್ತು 2010-2011ರ ವರ್ಷದ್ದು ಎಂದು ಅಂಬಾನಿ ಈ ತಿಂಗಳ ಆರಂಭದಲ್ಲಿ ಹೈಕೋರ್ಟ್‌ನ ಮೊರೆ ಹೋಗಿದ್ದರು.
ಅಂಬಾನಿ ಪರ ವಾದ ಮಂಡಿಸಿದ ಹಿರಿಯ ವಕೀಲ ರಫೀಕ್ ದಾದಾ, ಕಾಯ್ದೆಯ ನಿಬಂಧನೆಗಳು ಹಿಂದಿನ ವ್ಯವಹಾರಕ್ಕೆ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದಿದ್ದಾರೆ. ಐಟಿ ಇಲಾಖೆಯ ಪರ ವಾದ ಮಂಡಿಸಿದ ವಕೀಲ ಅಖಿಲೇಶ್ವರ ಶರ್ಮಾ, ಅರ್ಜಿಗೆ ಪ್ರತಿಕ್ರಿಯೆ ನೀಡಲು ಕಾಲಾವಕಾಶ ಕೋರಿದರು. ನ್ಯಾಯಮೂರ್ತಿ ಎಸ್ ವಿ ಗಂಗಾಪುರವಾಲಾ ಮತ್ತು ಆರ್ ಎನ್ ಲಡ್ಡಾ ಅವರ ವಿಭಾಗೀಯ ಪೀಠವು ಇದನ್ನು ಅನುಮತಿಸಿ ಅರ್ಜಿಯನ್ನು ನವೆಂಬರ್ 17 ರಂದು ವಿಚಾರಣೆಗೆ ಮುಂದೂಡಿತು.
PublicNext
26/09/2022 04:44 pm