ಇಸ್ಲಮಾಬಾದ್: ಪಾಕಿಸ್ತಾನದ ಅಂತಾರಾಷ್ಟ್ರೀಯ ಏರ್ಲೈನ್ನಲ್ಲಿ ಪ್ರಯಾಣ ಬೆಳೆಸಿದ ಪಾಕ್ ಪ್ರಯಾಣಿಕನೊಬ್ಬ ಮಾರ್ಗ ಮಧ್ಯೆ ಭಾರಿ ಹೈಡ್ರಾಮ ಮಾಡುವ ಮೂಲಕ ಸಹ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಯನ್ನು ಆತಂಕಕ್ಕೆ ದೂಡಿದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಯೊಂದು ವೈರಲ್ ಆಗಿದೆ. ಪೇಶಾವರ್-ದುಬೈ ಪಿಕೆ-283 ವಿಮಾನದಲ್ಲಿ ಸೆ. 14ರಂದು ಈ ಘಟನೆ ನಡೆದಿದೆ.
ಟೇಕಾಫ್ ಆಗಿ ವಿಮಾನ ಗಾಳಿಯಲ್ಲಿ ಸ್ಥಿರವಾದ ಬಳಿಕ ಎದ್ದು ನಿಂತ ವ್ಯಕ್ತಿಯೊಬ್ಬ ತನ್ನನ್ನು ವಿಮಾನದಿಂದ ಕೆಳಗಿಳಿಸಲು ವಿಮಾನ ಸಿಬ್ಬಂದಿಯನ್ನು ಕೇಳುತ್ತಲೇ ಇದ್ದ. ಆದರೆ, ವಿಮಾನ ಟೇಕಾಫ್ ಆಗಿರುವುದರಿಂದ ಅದು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿದರು, ಸಿಬ್ಬಂದಿ ಜೊತೆ ಗಲಾಟೆಗೆ ಇಳಿದ ವ್ಯಕ್ತಿ, ವಿಮಾನದ ಸೀಟುಗಳಿಗೆ ಪಂಚ್ ಮಾಡಿದ್ದಲ್ಲದೆ, ವಿಮಾನದ ಕಿಟಕಿಗೆ ಒಂದು ಬಾರಿ ಜಾಡಿಸಿ ಒದ್ದಿದ್ದಾನೆ. ಇದರಿಂದ ವಿಮಾನದ ಒಳಗಿದ್ದ ಸಹ ಪ್ರಯಾಣಿಕರು ಮತ್ತು ಸಿಬ್ಬಂದಿ ಆಘಾತಕ್ಕೆ ಒಳಗಾದರು.
ವೀಡಿಯೋದಲ್ಲಿರುವ ಸಿಬ್ಬಂದಿ ಪ್ರಕಾರ, ಪ್ರಯಾಣಿಕನು ತನ್ನ ಕೆಲವು ವಸ್ತುಗಳನ್ನು ತೆಗೆದು, ಸೀಟಿನ ಮೇಲಿಟ್ಟು ವಿಮಾನದ ಹಜಾರದ ಮೇಲೆ ಮಲಗಿದನು, ಮಾರ್ಗವನ್ನು ಸಂಪೂರ್ಣ ನಿರ್ಬಂಧಿಸಿದನು ಮತ್ತು ಸ್ಥಳದಲ್ಲೇ ಆಜಾನ್ ಕೂಗಲು ಪ್ರಾರಂಭಿಸಿದನು ಎಂದು ಹೇಳಿದ್ದಾರೆ. ಈ ವೇಳೆ ಆತನನ್ನು ನಿಯಂತ್ರಿಸಲು ಸಿಬ್ಬಂದಿ ಮುಂದಾದಾಗ ಆತ ಗಗನಸಖಿಯರ ಮೇಲೂ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ವಿಮಾನದ ಸೀಟುಗಳಿಗೆ ಪಂಚ್ ಮಾಡಿ, ಕಿಟಕಿ ಹೊಡೆಯಲು ಯತ್ನಿಸಿದ್ದಾನೆ.
ವಿಮಾನವು ದುಬೈನಲ್ಲಿ ಇಳಿಯುತ್ತಿದ್ದಂತೆ ವಿಮಾನ ನಿಲ್ದಾಣದ ಪ್ರಾಧಿಕಾರವು ಹೈಡ್ರಾಮ ಮಾಡಿದ ಪ್ರಯಾಣಿಕನನ್ನು ತನ್ನ ಕಸ್ಟಡಿಗೆ ತೆಗೆದುಕೊಂಡಿತು ಮತ್ತು ನಂತರ ಆತನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿತು. ಮಾಧ್ಯಮ ವರದಿಯ ಪ್ರಕಾರ, ಪಾಕಿಸ್ತಾನದ ಅಂತಾರಾಷ್ಟ್ರೀಯ ಏರ್ಲೈನ್ ಪ್ರಯಾಣಕನನ್ನು ಕಪ್ಪುಪಟ್ಟಿಗೆ ಸೇರಿಸಿದೆ.
PublicNext
20/09/2022 03:07 pm