ಪಾಂಡವಪುರ: ಟೀ ಕುಡಿಯುತ್ತ ಕೂತಿದ್ದ ಮಾವನನ್ನು ಅಳಿಯನೇ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ ಘಟನೆ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲಾರಿ ಚಾಲಕ ಸುರೇಶ್(50) ಮೃತರು. ಕೊಲೆಗೈದ ಅಳಿಯ ಟಿಪ್ಪರ್ ಚಾಲಕ ರಘು ಅಲಿಯಾಸ್ ಜಿಮ್ಮಿ ಕೊಲೆ ಆರೋಪಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಅರಕಲಗೂಡು ತಾಲೂಕಿನವರಾದ ಸುರೇಶ್ 20 ವರ್ಷದ ಹಿಂದೆ ಚಿನಕುರಳಿ ಗ್ರಾಮಕ್ಕೆ ಬಂದು ಲಾರಿ ಡ್ರೈವರ್ ಕೆಲಸ ಮಾಡಿಕೊಂಡು ಇಲ್ಲಿಯೇ ವಾಸವಿದ್ದರು. 7 ವರ್ಷದ ಹಿಂದೆ ತನ್ನ ಮಗಳನ್ನು ಟಿಪ್ಪರ್ ಚಾಲಕ ಚಿನಕುರಳಿ ಗ್ರಾಮದ ರಘು ಅಲಿಯಾಸ್ ಜಿಮ್ಮಿ ಎಂಬಾತನಿಗೆ ಕೊಟ್ಟು ಮದುವೆ ಮಾಡಿದ್ದರು. ಕುಡಿತಕ್ಕೆ ದಾಸನಾಗಿದ್ದ ರಘು, ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಗಂಡ ಮತ್ತು ಹೆಂಡತಿ ನಡುವೆ ಸಾಕಷ್ಟು ಬಾರಿ ಜಗಳವಾಗಿ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆಸಿ ಸಂಧಾನ ಮಾಡಿದ್ದರು. ಅದಾದ ಬಳಿಕವೂ ಪತ್ನಿಗೆ ಕಿರುಕುಳ ಮುಂದುವರಿದ ಹಿನ್ನೆಲೆಯಲ್ಲಿ ಆಕೆ ಗಂಡನ ಮನೆಯನ್ನು ಬಿಟ್ಟು ಅದೇ ಗ್ರಾಮದಲ್ಲಿರುವ ತಂದೆ ಸುರೇಶ್ ಮನೆಗೆ ಬಂದು ನೆಲೆಸಿದ್ದಳು. ನಂತರವೂ ಆರೋಪಿ ಪದೇಪದೆ ಮಾವನ ಮನೆಗೆ ತೆರಳಿ ಪತ್ನಿಯನ್ನು ಮತ್ತೆ ಮನೆಗೆ ಕಳುಹಿಸುವಂತೆ ಪೀಡಿಸುತ್ತಿದ್ದ. ಆದರೆ ಮಾವ, 'ನನ್ನ ಮಗಳನ್ನು ನಿನ್ನ ಮನೆಗೆ ಕಳುಹಿಸುವುದಿಲ್ಲ' ಎಂದು ಖಡಕ್ ಆಗಿಯೇ ಹೇಳಿದ್ದರು. ಇದೇ ಕಾರಣಕ್ಕಾಗಿ ಆರೋಪಿ ತನ್ನ ಮಾವನನ್ನು ಕೊಲೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
PublicNext
12/12/2020 08:23 am