ಬೆಂಗಳೂರು: ಐಎಂಎ ಎಂಬ ಖಾಸಗಿ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿದೆ. ಈಗ ಅವರು ನ್ಯಾಯಾಂಗ ವಶದಲ್ಲಿದ್ದಾರೆ. ಐಎಂಎ ಕಂಪನಿಯಿಂದ ಹಣ ಪಡೆದ ಆರೋಪದಲ್ಲಿ ಬೇಗ್ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ. ರೋಷನ್ ಬೇಗ್ ಬಂಧನವಾಗಿರುವ ಐಎಂಎ ಬಹುಕೋಟಿ ವಂಚನೆ ಪ್ರಕರಣದ ಬಗ್ಗೆ ಕೇಳಿದರೆ ನೀವು ಹೌಹಾರುವುದು ಖಂಡಿತ. ಬರೋಬ್ಬರಿ 4,000 ಕೋಟಿ ರೂ. ವಂಚನೆ ಪ್ರಕರಣ ಇದಾಗಿದೆ.
ಬೆಂಗಳೂರು ಮೂಲದ ಐಎಂಎ ಮತ್ತು ಅದರ ಗುಂಪು ಸಂಸ್ಥೆಗಳು ಇಸ್ಲಾಂ ಹೂಡಿಕೆಯ ಮಾರ್ಗಗಳನ್ನು ಬಳಸಿಕೊಂಡು ಹೂಡಿಕೆಗೆ ಹೆಚ್ಚಿನ ಆದಾಯದ ಭರವಸೆ ನೀಡಿದ್ದವು. ಮತ್ತು ಲಕ್ಷಾಂತರ ಜನರಿಗೆ ಸಾವಿರಾರು ಕೋಟಿ ವಂಚಿಸಿದ್ದವು. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಹೊರಡಿಸಿದ ಅಧಿಸೂಚನೆಗಳಿಗೆ ಅನುಸಾರವಾಗಿ ಸಿಬಿಐ ಅಧಿಕಾರಿಗಳು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಅಲಿಖಾನ್‌ನನ್ನು ಬಂಧಿಸಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿನ ಭ್ರಷ್ಟಾಚಾರದಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮನ್ಸೂರ್ ಅಲಿ ಖಾನ್ ವಿಡಿಯೋ ಮಾಡಿ ದುಬೈಗೆ ಪರಾರಿಯಾಗಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆ ವಿಡಿಯೋ ಕೂಡ ವೈರಲ್ ಆಗಿತ್ತು. ಈ ರೋಚಕ ವಂಚನೆ ಪ್ರಕರಣದ ಒಂದಿಷ್ಟು ಮಾಹಿತಿ ಇಲ್ಲಿದೆ.
ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಹಿಂದಿರುಗಿದ್ದ ಮನ್ಸೂರ್ ಖಾನ್ ಪೂಂಜಿ ಯೋಜನೆಯನ್ನು ಪರಿಚಯಿಸಿ ಹೆಚ್ಚಿನ ಆದಾಯದ ಭರವಸೆ ನೀಡಿ 30,000ಕ್ಕೂ ಹೆಚ್ಚು ಮುಸ್ಲಿಮರಿಗೆ ವಂಚಿಸಿದ್ದ. ಎಲ್ಲ ಪೂಂಜಿ ಯೋಜನೆಗಳು ಕೂಡ ಇದೇ ಹಾದಿಯನ್ನು ಹಿಡಿದಿದ್ದವು. ಮ್ಯಾನೇಜ್ಮೆಂಟ್ ಪದವೀಧರನಾದ ಖಾನ್ 2006ರಲ್ಲಿ ಐಎಂಎ ಸಂಸ್ಥೆಯನ್ನು ಪ್ರಾರಂಭಿಸಿದ್ದ. ಪಾಲುದಾರರಿಂದ ಹೂಡಿಕೆ ಮಾಡಿಸಿ ಅವರಿಗೆ ಶೇ.7 ರಿಂದ ಶೇ.8ರಷ್ಟು ಆದಾಯ ನೀಡುವ ಕಾರ್ಯ ಆರಂಭಿಸಿದ್ದ. ಆದರೆ, ಅದರ ಹಿಂದಿನ ವಂಚನೆಯ ಹಾದಿ ಮಾತ್ರ ಬೆಳಕಿಗೆ ಬಂದಿದ್ದು 2019ರಲ್ಲಿ.
ಮನ್ಸೂರ್ ಅಲಿ ಖಾನ್ ತನ್ನ ಯೋಜನೆಗಳ ಸಾಕಾರಕ್ಕೆ ಸ್ಥಳೀಯ ಮೌಲ್ವಿಸ್ ಮತ್ತು ಮುಸ್ಲಿಂ ನಾಯಕರ ದುಂಬಾಲು ಬಿದ್ದರು. ಧರ್ಮನಿಷ್ಠ ಮುಸ್ಲಿಮರಿಗಾಗಿ ಈ ಯೋಜನೆಗಳು ಎಂದು ಅವರನ್ನು ಮೆಚ್ಚಿಸಿ ಐಎಂಎನಲ್ಲಿ ಹೂಡಿಕೆ ಮಾಡಲು ಜನರನ್ನು ಆಕರ್ಷಿಸುತ್ತಿದ್ದರು. ಆತ ಮತ್ತು ಐಎಂಎ ಸಿಬ್ಬಂದಿಗಳು ಯಾವಾಗಲೂ ಬಿಳಿ ಪೈಜಾಮ-ಕುರ್ತಾದಲ್ಲಿರುತ್ತಿದ್ದರು. ನೌಕರರು ಉದ್ದನೆಯ ಗಡ್ಡ ಬೆಳೆಸಿದ್ದರು. ಕಚೇರಿಯಲ್ಲಿಯೇ ನಮಾಜ್ ಮಾಡುತ್ತಿದ್ದರು. ಪ್ರತಿಯೊಬ್ಬ ಹೂಡಿಕೆದಾರರಿಗೂ ಪವಿತ್ರ ಕುರ್‌ಆನ್ ಅನ್ನು ಉಡುಗೊರೆಯಾಗಿ ನೀಡಲಾಗುತ್ತಿತ್ತು. ಮಸೀದಿ ಮತ್ತು ಮದರಸಾಗಳಿಗೆ ಐಎಂಎ ಕಡೆಯಿಂದ ದಾನ ನಡೆಯುತ್ತಲೇ ಇತ್ತು.
ಈ ಎಲ್ಲ ವ್ಯವಹಾರ ಆರಂಭದಲ್ಲಿ ವ್ಯವಹಾರ ಉತ್ತಮವಾಗಿಯೇ ಇತ್ತು. ಅದರಿಂದ ಹೂಡಿಕೆದಾರರಿಗೆ ಹೆಚ್ಚಿನ ಆದಾಯ ಸಿಗುತ್ತಿದ್ದರಿಂದ ಅವರು ಕೂಡ ಹೆಚ್ಚೆಚ್ಚು ಹಣ ಹೂಡಿಕೆ ಮಾಡಲು ಮುಂದಾದರು. ಅಲ್ಲಿಂದ ಖಾನ್ ಉದ್ಯಮ ಬುಲಿಯನ್‌ನಿಂದ ರಿಯಾಲ್ಟಿ ಮತ್ತು ಚಿಲ್ಲರೆ ಆಭರಣ ಮಳಿಗೆಗೆ ಹಬ್ಬಿತು. ಅದಾದ ನಂತರ ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದವರೆಗೂ ಮನ್ಸೂರ್ ಅಲಿ ಖಾನ್ ಸಾಮ್ರಾಜ್ಯ ಬೆಳೆದಿತ್ತು. ಅದರ ಜೊತೆ ಐಎಮ್ಎ ಕಂಪನಿ ಗೋಲ್ಡ್ ಫೈನಾನ್ಸ್ ಕೂಡ ಸೇರಿದ್ದರಿಂದ ಖಾನ್ ಮುಸ್ಲಿಂ ಹೂಡಿಕೆದಾರರಲ್ಲಿ ಮತ್ತಷ್ಟು ನಂಬಿಕೆ ಗಳಿಸಿಕೊಂಡರು.
೨೦೧೯ರ ಮೇ ತಿಂಗಳಲ್ಲಿ ಹೂಡಿಕೆದಾರರಿಗೆ ನಿಜವಾದ ಆಘಾತಕಾರಿ ಸುದ್ದಿಯೊಂದು ಕೇಳಿತು. ಹಠಾತ್ ಆಗಿ ಐಎಂಎ ಕಚೇರಿಯನ್ನು ಮುಚ್ಚಲಾಯಿತು. ಆದರೆ, ಅದನ್ನು ಖಾನ್ ಈದ್ ರಜಾದಿನವೆಂದು ಘೋಷಿಸಿದ್ದ. ಇದರಿಂದ ಭಯಭೀತರಾದ ಜನ ತಮ್ಮ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ಕಚೇರಿ ಮುಂದೆ ಸಾಲುಗಟ್ಟಿದ್ದರು. ಇದೆಲ್ಲ ಆದ ನಂತರ ನಂತರ ಮನ್ಸೂರ್ ಅಲಿ ಖಾನ್ ವಿಧಿಯೋ ಒಂದನ್ನು ಹರಿಬಿಟ್ಟು ಪರಾರಿಯಾಗಿದ್ದ.
ಈ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಅಜಯ್ ಹಿಲೋರಿ, ಹೇಮಂತ್ ನಿಂಬಾಳ್ಕರ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ನಡೆಸಿದ ಸಿಬಿಐ ಬಳಿಕ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಪಟ್ಟಿಯನ್ನು ಕೂಡ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಕಂಪನಿ ಹೂಡಿಕೆದಾರರಿಗೆ ವಂಚನೆ ಮಾಡಿದ್ದಕ್ಕೆ ಸಾಕ್ಷ್ಯಗಳು ಲಭಿಸಿದ್ದರೂ, ಸತ್ಯಾಂಶ ಮುಚ್ಚಿಟ್ಟು ಪ್ರಕರಣವನ್ನು ಅಂತ್ಯಗೊಳಿಸಿದ್ದರು ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ಹೇಳಿತ್ತು. ಐಎಂಎ ವಿರುದ್ಧ ಆರಂಭಿಕ ಹಂತದಲ್ಲಿ ವಿಚಾರಣೆ ನಡೆಸಿದ್ದ ನಿಂಬಾಳ್ಕರ್, ಕಂಪನಿಯ ಪರವಾದ ವರದಿ ಸಿದ್ಧಪಡಿಸಿದ್ದರು ಎನ್ನಲಾಗಿದೆ.
PublicNext
23/11/2020 07:59 am