ಕಾರವಾರ: ಕೊಂಕಣ ರೈಲ್ವೆಯ ಎ.ಸಿ. ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ಅಪಹರಿಸಿ ಪರಾರಿಯಾಗಿದ್ದ ಕೇರಳ ಮೂಲದ ವ್ಯಕ್ತಿಯನ್ನು ಮಡಗಾಂವ್ ರೈಲ್ವೆ ಸುರಕ್ಷತಾ ದಳದ (ಆರ್.ಪಿ.ಎಫ್.) ಅಧಿಕಾರಿಗಳು ಕಾರವಾರ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ, ಆತನಿಂದ 2.2 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಕೇರಳದ ಕಣ್ಣೂರು ನಿವಾಸಿ ನಿಖಿಲ್ ಕುಮಾರ್ ಎಂದು ಗುರುತಿಸಲಾಗಿದೆ. ನ.13ರಂದು ಮಂಗಳಾ ಎಕ್ಸ್ ಪ್ರೆಸ್ ರೈಲಿನಲ್ಲಿ ಉಡುಪಿಯಿಂದ ಮುಂಬೈಗೆ ಹವಾನಿಯಂತ್ರಿತ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವನಿತಾ ದಿವಾಕರ ಎಂಬವರ ಬ್ಯಾಗ್ ಕಳವಾಗಿತ್ತು. ಅದರಲ್ಲಿ 2.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಪರ್ಸ್, ಎಟಿಎಂ ಕಾರ್ಡ್ ಹಾಗೂ ಇತರ ದಾಖಲೆಗಳಿದ್ದವು.
ಈ ಬಗ್ಗೆ ಅವರು ರೈಲಿನ ಟಿಕೆಟ್ ಪರಿಶೀಲನಾಧಿಕಾರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದರು. ಅದನ್ನು ಆಧರಿಸಿ ಮಡಗಾಂವ್ ರೈಲ್ವೆ ಭದ್ರತಾ ದಳದ ಅಪರಾಧ ವಿಭಾಗದ ಇನ್ ಸ್ಪೆಕ್ಟರ್ ವಿನೋದ್ ಕುಮಾರ್, ಸಿ.ಸಿ. ಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ, ಟೋಪಿ ಧರಿಸಿದ್ದ, ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ಅವರು ಗುರುತಿಸಿದರು. ಆತನ ಭಾವಚಿತ್ರವನ್ನು ಆರ್.ಪಿ.ಎಫ್ . ಸಿಬ್ಬಂದಿಯ ವಾಟ್ಸ್ ಆ್ಯಪ್ ಗ್ರೂಪ್‌ಗೆ ಕಳುಹಿಸಿಕೊಡಲಾಯಿತು. ಆ ವ್ಯಕ್ತಿಯು ಅದೇ ಟೋಪಿಯನ್ನು ಧರಿಸಿ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿರುವುದನ್ನು ಸ್ಥಳೀಯ ಆರ್.ಪಿ.ಎಫ್. ಕಾನ್ ಸ್ಟೇಬಲ್ ಆರ್.ಡಿ.ವಿನಾಯಕ ಪತ್ತೆ ಹಚ್ಚಿದರು. ಆತ ಕಳವು ಮಾಡಿದ್ದ ವಸ್ತುಗಳೊಂದಿಗೆ ತನ್ನ ಊರಿಗೆ ಮರಳುತ್ತಿದ್ದ. ಪಾಸಿಂಗ್ ಸಲುವಾಗಿ ರೈಲು ಕಾರವಾರದಲ್ಲಿ ನಿಂತಿದ್ದಾಗ ಆತನನ್ನು ವಶಕ್ಕೆ ಪಡೆದರು. ಚಿನ್ನಾಭರಣಗಳೂ ಸೇರಿದಂತೆ ಆರೋಪಿಯು ಕದ್ದ ವಸ್ತುಗಳೆಲ್ಲವನ್ನೂ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಕೊಂಕಣ ರೈಲ್ವೆ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
PublicNext
17/11/2020 06:11 pm