ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದರ ಹಿಂದೆ ಮತ್ತೊಂದರಂತೆ ಐಷಾರಾಮಿ ಕಾರುಗಳಿಂದ ಭೀಕರ ಅಪಘಾತ ಸಂಭವಿಸುತ್ತಿವೆ. ಹೀಗಿದ್ದರೂ ಐಷಾರಾಮಿ ಕಾರು ಮಾಲೀಕರ ಶೋಕಿ ಮುಂದುವರಿದಿದೆ. ಕೋರಮಂಗಲ ಮತ್ತು ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಭೀಕರ ಅಪಘಾತದ ಬಳಿಕವೂ ಯುವಕರು ಎಚ್ಚೆತ್ತುಕೊಂಡಿಲ್ಲ. ಮೋಜು ಮಸ್ತಿಯಿಂದ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.
ದೊಮ್ಮಲೂರು ರಸ್ತೆ ಬಳಿ ತನ್ನ ಪಾಡಿಗೆ ತಾನು ಹೋಗುತ್ತಿದ್ದ ಇಟಿಯೋಸ್ ಕಾರಿಗೆ ಐಷಾರಾಮಿ ಪೋರ್ಷೆ ಕಾರು ಡಿಕ್ಕಿ ಹೊಡೆದಿದ್ದು, ಎರಡೂ ಕಾರುಗಳು ಸಂಪೂರ್ಣ ಜಖಂ ಆಗಿವೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಟೆಕ್ಸ್ಟೈಲ್ ಕಂಪನಿಯೊಂದರ ಮಾಲೀಕನ ಮಗ ಜುವೇರ್ ಮವಾನಿ ಎಂಬಾತ ತನ್ನ ಗೆಳತಿ ಶ್ರೇಯಾ ಜೊತೆ ಇಂದಿರಾನಗರದಿಂದ ಪೋರ್ಷೆ ಕಾರಿನಲ್ಲಿ ಸುಮಾರು ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಬರುತ್ತಿರುವಾಗ ಇಟಿಯೋಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎದುರಿಗಿದ್ದ ಕಾರು ರಿವರ್ಸ್ ಆಗಿ ಜಖಂ ಆಗಿದ್ದು, ಇಟಿಎಸ್ ಕಾರಿಗೆ ಡಿಕ್ಕಿ ಹೊಡೆಯೋದಲ್ಲದೇ ಅಲ್ಲೇ ಇದ್ದ ಮಿಲಿಟರಿ ಆಸ್ಪತ್ರೆ ಗೇಟ್ಗೂ ಡಿಕ್ಕಿ ಹೊಡೆದಿದೆ.
ಪೋರ್ಷೆ ಕಾರ್ನಲ್ಲಿ ಜುವೇರ್ ಮತ್ತು ಶ್ರೇಯಾ ಇದ್ದರೆ ಇಟಿಎಸ್‌ನಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿದ್ದರು. ಇಷ್ಟು ಭೀಕರ ಅಫಘಾತವಾದ್ರೂ ಅದೃಷ್ಟವಶಾತ್ ಯಾರ ಪ್ರಾಣಕ್ಕೂ ಅಪಾಯವಾಗಿಲ್ಲ. ಘಟನಾ ಸ್ಥಳಕ್ಕೆ ಹಲಸೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ಯಪಾನ ಮಾಡಿ ಕಾರು ಚಲಾಯಿಸಿರುವ ಕುರಿತು ಅನುಮಾನ ಹಿನ್ನಲೆ ಚಾಲಕ ಜುವೇರ್ನನ್ನು ವಶಕ್ಕೆ ಪಡೆದ ಪೊಲೀಸರು ಆತನ ರಕ್ತದ ಮಾದರಿಯನ್ನು ಕಲೆ ಹಾಕಿದ್ದಾರೆ. ಹಲಸೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
26/09/2021 09:00 am