ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
Saverecharge ಎಂಬ ವೆಬ್ ಸೈಟ್ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳ ಲಕ್ಷಾಂತರ ಗ್ರಾಹಕರನ್ನು ವಂಚಿಸಿದ್ದ Onlie ಕಂಪನಿ ವಿರುದ್ಧ ಈಗ ಶಿವಮೊಗ್ಗ ಸೈಬರ್ ಕ್ರೈಂ ಠಾಣೆಯಲ್ಲಿ ಅಕ್ಟೋಬರ್ 13 ರಂದು ಪ್ರಕರಣ ದಾಖಲಾಗಿದೆ.
ಮೂರು ಕಂತುಗಳಲ್ಲಿ ವಿಶೇಷ ವರದಿ ಪ್ರಕಟಿಸುವ ಮೂಲಕ PublicNext ಈ ಹಗರಣವನ್ನು ಬಯಲಿಗೆಳೆದಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಸಾವಿರಾರು ಜನ ವಂಚನೆಯಿಂದ ಪಾರಾಗಿದ್ದಾರೆ, ಈಗಾಗಲೇ ಮೋಸ ಹೋದವರು ಸೈಬರ್ ಕ್ರೈ ಠಾಣೆಗೆ ದೂರು ನೀಡಿದ್ದಾರೆ.
ಶಿವಮೊಗ್ಗದ ಫೈರೋಜ್ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿಗಳಾದ ಕಂಪನಿಯ ದಿಲ್ಲಿಯ ಎಂ.ಡಿ ಸುಮೀತ್ ಕುಮಾರ್ ಹಾಗೂ ಮಂಗಳೂರಿನ ಲತೀಫ್ ಎಂಬವರ ವಿರುದ್ದ ಅದೇ ದಿನ ಪೊಲೀಸರು ಕೋರ್ಟಿಗೆ ಎಫ್ಐಆರ್ ಸಲ್ಲಿಸಿ ತನಿಖೆ ಮುಂದುವರೆಸಿದ್ದಾರೆ.
Saverecharge ಕಂಪನಿ ಮೂಲಕ 1250 ರೂಗಳಲ್ಲಿ ಒಂದು ವರ್ಷ ಮೊಬೈಲ್ ರಿಚಾರ್ಜ ಮಾಡಿಕೊಡಲಾಗುತ್ತಿದ್ದು, ಅದರಲ್ಲಿ ಪ್ರತಿ ರಿಚಾರ್ಜ್ ದಲ್ಲಿ ಏಜೆಂಟರುಗಳಿಗೆ 50 ರೂ ಕಮಿಷನ್ ಭರವಸೆ ನೀಡಲಾಗಿತ್ತು.
ಕಂಪನಿಯ ಎಂ.ಡಿ ಸುಮೀತ್ ಕುಮಾರ್ ಹಾಗೂ ಮಂಗಳೂರಿನ ಲತೀಫ್ ಎಂಬವರನ್ನು ನಂಬಿ ಹಾವೇರಿಯ ಮೇಘರಾಜ್, ಸಾಗರದ ಮೋಹನ್, ಹುಬ್ಬಳ್ಳಿಯ ಫೈರೋಜ್, ಬೆಳಗಾವಿಯ ಮನೋಜ್, ತೀರ್ಥಹಳ್ಳಿಯ ರವಿ, ಸುಜಿತ್, ಶಿವಮೊಗ್ಗದ ಇಮ್ರಾನ್, ಶೃಂಗೇರಿಯ ದೀಕ್ಷಿತ್ ತಮ್ಮ ಕೆಳಗೆ ತಂಡ ಕಟ್ಟಿಕೊಂಡು ಸಾವಿರಾರು ಜನರ ಹೆಸರು ನೋಂದಣಿ ಮಾಡಿಸಿದ್ದಾರೆ.
ಆದರೆ Saverecharge ಕಂಪನಿಯು MNB Soft Solution ಎಂಬ ಬೇರೊಂದು ಕಂಪನಿ ಹೆಸರಿನ ICICI ಹಾಗೂ SBI ಬ್ಯಾಂಕ್ ಖಾತೆಗೆ ಒಬ್ಬೊಬ್ಬರಿಂದ ಸುಮಾರು ಐದು ಲಕ್ಷರೂಗಳವರೆಗೆ ಹಣ ಜಮಾ ಮಾಡಿಸಿಕೊಂಡು ಫರಾರಿಯಾಗಿದೆ.
ತಮ್ಮನ್ನು ನಂಬಿ ಹಣ ಕಟ್ಟಿದವರು ಈಗ ಹಣ ವಾಪಸ್ ಕೇಳುತ್ತಿದ್ದಾರೆ. ಕೂಡಲೆ ಕಂಪನಿ ವಿರುದ್ಧ ಕೈಗೊಳ್ಳಬೇಕೆಂದು ಕೋರಲಾಗಿದೆ. ಕಂಪನಿ ಯಾವ ರೀತಿ ಮೋಸ ಮಾಡಿದೆ ಎಂಬ ಬಗ್ಗೆ ದೂರಿನ ಪ್ರತಿಯಲ್ಲಿ ವಿವರಿಸಲಾಗಿದೆ.
ಏಜೆಂಟರುಗಳೇ ಹೇಳುವ ಪ್ರಕಾರ Saverecharge ಕರ್ನಾಟಕದಲ್ಲಿಯೆ ಸುಮಾರು 50 ಕೋಟಿ ರೂ ವಂಚಿಸಿದೆ ಎಂದು ಹೇಳಲಾಗುತ್ತಿದೆ. ಈಗ ಮಧ್ಯಪ್ರದೇಶದ ಇಂದೋರ್ ದಲ್ಲಿ ಟೆಂಟ್ ಹಾಕಿರುವ ಕಂಪನಿ ಅಲ್ಲಿಯ ಪಂಚತಾರಾ ಹೊಟೆಲುಗಳಲ್ಲಿ ಸಭೆಗಳನ್ನು ನಡೆಸಿ ಕರ್ನಾಟಕದಂತೆ ಅಲ್ಲಿಯ ನಿರುದ್ಯೋಗಿ ಯುವಕರಿಗೆ ಟೋಪಿ ಹಾಕುವ ಸಂಚು ರೂಪಿಸಿದೆ ಎಂಬ ಮಾಹಿತಿ ಕೆಲವು ದಾಖಲೆಗಳು PublicNext ಮಾಧ್ಯಮಕ್ಕೆ ಲಭ್ಯವಾಗಿದೆ.
ಆತ್ಮೀಯ ಓದುಗರೆ ಯಾವುದೇ ಕಾರಣಕ್ಕೂ ಇಂತಹ Fraud ಕಂಪನಿಗಳ ಪ್ರಚಾರದ ಜಾಹೀರಾತಿಗೆ ಮರುಳಾಗಬೇಡಿ. ನಿಮಗೆ ಎಷ್ಟೇ ಆತ್ಮೀಯರಾಗಿರಲಿ, ಸ್ನೇಹಿತರಾಗಿರಲಿ ಅವರನ್ನು ನಂಬಿ ಹಣ ಕಳೆದುಕೊಳ್ಳಬೇಡಿ. ತಮಗೆ ಸಿಗುವ ಅತ್ಯಲ್ಪ ಕಮಿಷನ್ ಆಸೆಗೆ ಬಿದ್ದು ನಿಮ್ಮಂಥವರನ್ನು ಬಲೆಗೆ ಕೆಡವುತ್ತಾರೆ. ಯೂಟ್ಯೂಬಿಗರಂತೂ ಇಂತಹ ಬ್ಲೇಡ್ ಕಂಪನಿಗಳನ್ನು ಓತೋಪ್ರೋತವಾಗಿ ಹೊಗಳಿ ತಾವೂ ಮೋಸ ಹೋಗುವುದಲ್ಲದೆ ಇತರರನ್ನೂ ಖೆಡ್ಡಾಗೆ ಕೆಡವುತ್ತಿದ್ದಾರೆ.
ಈಗ ಅದೇ ಯುಟ್ಯೂಬಿಗರು ಅದೇ ಕಂಪನಿ ವಿರುದ್ಧ ಸಿಡಿದೆದ್ದು, ತಮ್ಮ ಕಾನೂನು ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುವಂತೆ ವಿನಂತಿಸುತ್ತಿದ್ದಾರೆ.
ಎಲ್ಲ ಪ್ರತಿಷ್ಠಿತ ಮೊಬೈಲ್ ಸೇವಾ ಕಂಪನಿಗಳು ತಮ್ಮದೆ Plan ಹೊಂದಿರುತ್ತವೆ,ತಮ್ಮದೆ ಅಧಿಕೃತ ವೆಬ್ ಸೈಟ್ ಹೊಂದಿರುತ್ತವೆ. ಅವುಗಳ ಮೂಲಕವೇ ವ್ಯವಹರಿಸಿ ಎಂಬುದು ನಮ್ಮ ಸಲಹೆ.
PublicNext
16/10/2020 08:45 am