ವಿಭಿನ್ನ ಕಥಾಹಂದರ ಹೊಂದಿರುವ ವ್ಹೀಲ್ ಚೇರ್ ರೋಮಿಯೋ ಚಿತ್ರಕ್ಕಾಗಿ ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿರುವ "ರಂಗುರಾಟೆ" ಎಂದು ಆರಂಭವಾಗುವ ಹಾಡು ಜಂಕಾರ್ ಮ್ಯೂಸಿಕ್ ಮೂಲಕ ಗಣೇಶ್ ಚತುರ್ಥಿ ದಿನ ಬಿಡುಗಡೆಯಾಗಿ ಪ್ರೇಕ್ಷಕನ ಮನ ಗೆದ್ದಿದೆ. ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡು ಮೂರೇ ದಿನಗಳಲ್ಲಿ ಬಹಳ ಜನಪ್ರಿಯವಾಗಿದ್ದು ವ್ಹಿಲ್ ಚೇರ್ ರೋಮಿಯೋ ಬಿ.ಜೆ.ಭರತ್ ಈ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಸದ್ಯದಲ್ಲೇ "ವ್ಹೀಲ್ ಚೇರ್ ರೋಮಿಯೋ" ರಾಜ್ಯಾದ್ಯಂತ ಬಿಡುಗಡೆಗೆ ತುದಿಗಾಲಲ್ಲಿದ್ದು
ಅಂಗವಿಕಲರ ಪ್ರೇಮಕಥೆಯ ಈ ಚಿತ್ರದ ತುಣುಕುಗಳೇ ನೋಡುಗರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಚಿತ್ರ ಕೂಡ ಜನ ಮನ ಸೂರೆಗೊಳ್ಳಲಿದೆ ಎಂಬ ನಂಬಿಕೆ ಈಗಾಗಲೇ ಸಿನಿಮಾ ತಂಡದಲ್ಲಿದೆ.
ಕಾಲು ಕಳೆದುಕೊಂಡಿರುವ ಹುಡುಗನ ಪಾತ್ರದಲ್ಲಿ ರಾಮ್ ಚೇತನ್ ಅಭಿನಯಿಸಿದ್ದಾರೆ. ಕಣ್ಣಿಲ್ಲದಿರುವ ಹುಡುಗಿಯ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲ ನಾಣಿ, ಗಿರೀಶ್ ಶಿವಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ತಂದೆ-ಮಗನ ಬಾಂಧವ್ಯದ ಸನ್ನಿವೇಶಗಳು ಕೂಡ ಈ ಚಿತ್ರದ ಪಮುಖಾಂಶಗಳಲ್ಲಿ ಒಂದು.
ಜಿ.ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಮೂಲಕ ಟಿ.ವೆಂಕಟಾಚಲಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್ ಹಾಗೂ ಜಯಂತ್ ಕಾಯ್ಕಿಣಿ ಅವರು ಬರೆದಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ.
ಸಂತೋಷ್ ಪಾಂಡಿ ಛಾಯಾಗ್ರಹಣ, ಕಿರಣ್ ಸಂಕಲನ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಕಂಬಿರಾಜು ನೃತ್ಯ ನಿರ್ದೇಶನ " ವ್ಹೀಲ್ ಚೇರ್ ರೋಮಿಯೋ" ಚಿತ್ರಕ್ಕಿದೆ.
PublicNext
13/09/2021 09:24 am