ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷಗಳು ಪೂರೈಸಿದೆ. 25ನೇ ವರ್ಷದ ಸಂಭ್ರಮವನ್ನು ಕಿಚ್ಚ ಸುದೀಪ್ ದುಬೈನಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಸುದೀಪ್ ಸದ್ಯ 'ವಿಕ್ರಾಂತ್ ರೋಣ' ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಟೀಸರ್ ಅನ್ನು ಬುರ್ಜ್ ಖಲೀಫಾ ಮೇಲೆ ಅನಾವರಣ ಮಾಡಲಾಗುತ್ತಿದೆ. ಜನವರಿ 31ಕ್ಕೆ ಬುರ್ಜ್ ಖಲೀಫಾ ಮೇಲೆ ಟೀಸರ್ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೆ ಕಿಚ್ಚ ಇಂದು ದುಬೈನಿಂದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಕಿಚ್ಚ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 25 ವರ್ಷದ ಸಿನಿಮಾ ಜರ್ನಿಯ ಏಳು-ಬೀಳಿನ ಬಗ್ಗೆ ಮಾತನಾಡಿದ್ದಾರೆ.
'ಹುಚ್ಚ' ಸಿನಿಮಾ ರಿಲೀಸ್ ಆದ ದಿನ ಚಿತ್ರ ಮಂದಿರಕ್ಕೆ ತೆರಳಿದ್ದಾಗ ಆದ ಅನುಭವದ ಬಗ್ಗೆ ಮಾತನಾಡಿದ ಸುದೀಪ್, 'ಚಿತ್ರಮಂದಿರಕ್ಕೆ ಹೋದಾಗ, 7-8 ಜನ ಇದ್ರು. ಒಬ್ಬ ಹಾರ ಕೈಯಲ್ಲಿ ಹಿಡಿದು ನಿಂತಿದ್ದ. ನಾನು ಹೋಗುತ್ತಿದ್ದಹಾಗೆ ಬಂದು ಹಾರ ಹಾಕಿದ್ರು. ಇರೋದು 8 ಜನ ಅದ್ರಲ್ಲಿ ಒಬ್ಬ ಬಂದು ಹಾರ ಹಾಕಿದ್ದು ನೋಡಿ, ತಿಥಿ ಮಾಡೋಕೆ ಬಂದಿದ್ದಾನಾ ಏನು ಅಂತ ಗೊತ್ತಾಗಿಲ್ಲ. ಕಟೌಟ್ ನೋಡಿದ್ರೆ ಕಾಗೆ ಬಿಟ್ರೆ ಒಂದು ಹಾರನು ಇರಲಿಲ್ಲ.
'ನಾನು ನನ್ನ ಸ್ನೇಹಿತ ಚಿತ್ರಮಂದಿರದ ಒಳಗೆ ಹೋದೆವು. ಮ್ಯಾನೇಜರ್ ಬಂದು ಕಾಫಿ ಬೇಕಾ ಅಂತ ಕೇಳಿದ್ರು, ಬೇಡ ಎಂದೆ, ಕಾಫಿ ತಗೊಳ್ಳಿ ಎಂದು ಒತ್ತಾಯ ಮಾಡಿದ್ರು. ಅವರು ನನ್ನ ಸ್ನೇಹಿತನ ಬಳಿ ಕೇಳಿದ್ರು ಏನಾಯಿತು ಎಂದು ಆಗ ಜನ ಇಲ್ಲ ಅದಕ್ಕೆ ಹೀಗೆ ಕುಳಿದ್ದಾರೆ ಎಂದ. ಆಗ ಅವರು ಇದಕ್ಕಿಂತ ಜನ ಬೇಕಾ ಎಂದು ಹೇಳಿದ್ರು. 8 ಜನಕ್ಕೆ ಇವರು ಇಷ್ಟು ದೊಡ್ಡ ಕ್ರೌಡ್ ಅಂತ ಅಂದುಕೊಂಡಿದ್ದಾರಾ ಅಂತ ಅಂದು ಕೊಂಡೆ.
'ಆಗ ಅವರು ಹೇಳಿದ್ರು ಬೆಳಗ್ಗೆ 7 ಗಂಟೆ ಶೋ ಹೌಸ್ ಫುಲ್ ಆಗಿದೆ ಅಂತ. ಅದನ್ನು ಕೇಳಿ ನನ್ನ ಕಿವಿ ಮ್ಯೂಟ್ ಆಯಿತು. ಬಳಿಕ ಚಿತ್ರಮಂದಿರಕ್ಕೆ ಜನ ಬರಲು ಪ್ರಾರಂಭಿಸಿದರು. ಸಿನಿಮಾ ಮುಗಿತು ಎಲ್ಲರೂ ಸೈಲೆಂಟ್ ಆಗಿದ್ದರು. ನಾನು ಕ್ರೌಡ್ ಜೊತೆ ಕೆಳಗೆ ಇಳಿದು ಬಂದೆ. ಒಬ್ಬ ನೋಡಿ ನನ್ನನ್ನು ಕಿಚ್ಚ ಎಂದು ಕರೆದ. ಆಗ ಎಲ್ಲರೂ ಹಾಗೆ ತಿರುಗಿ ತಿರುಗಿ ನೋಡುತ್ತ ಕಿಚ್ಚ ಕಿಚ್ಚ ಎಂದು ಕರೆಯಲು ಪ್ರಾರಂಭಿಸಿದರು.
ಮೈ ಆಟೋಗ್ರಾಫ್ ಸಿನಿಮಾಗಾಗಿ ನಮ್ಮ ತಂಡ ಸಿಕ್ಕಾಪಟ್ಟೆ ಹಾರ್ಡ್ ವರ್ಕ್ ಮಾಡಿದ್ದೇವೆ. ಅದಕ್ಕಾಗಿ ಮನೆ ಆಸ್ತಿ ಪತ್ರ ಅಡ ಇಟ್ಟದ್ದೆ. ಸಿನಿಮಾ ಯಶಸ್ಸು ಕಾಣದೇ ಇದ್ದರೆ ಏನು ಮಾಡೋದು ಅಂತಾ ಸೂಟ್ ಕೇಸ್ ರೆಡಿ ಮಾಡಿಡಲು ಹೆಂಡತಿಗೆ ಹೇಳಿದ್ದೆ. ಆದ್ರೆ ನನ್ನ ಚೊಚ್ಚಲ ನಿರ್ದೇಶನದ ಆ ಚಿತ್ರವನ್ನು ಜನ ಕೈ ಹಿಡಿದರು. ನಿರ್ದೇಶಕ ಆಗಬೇಕೆಂಬ ಬಯಕೆಯಿಂದಲೇ ನನು ಸಿನಿರಂಗಕ್ಕೆ ಬಂದವನು. ಕೊನೆಗೆ ನಿರ್ದೇಶಕನಾಗಿಯೂ ಯಶಸ್ಸು ಕಂಡಿದ್ದೇನೆ. ಇದಕ್ಕೆಲ್ಲ ಕಾರಣ ಪ್ರೇಕ್ಷಕರು. ಅವರೇ ನನ್ನನ್ನು ಈ ಹಂತಕ್ಕೆ ಬೆಳೆಸಿದರು ಎಂದು ಸುದೀಪ್ ತಮ್ಮ ಹಳೆಯ ನೆನೆಪುಗಳನ್ನು ಬಿಚ್ಚಿಟ್ಟರು.
PublicNext
30/01/2021 03:47 pm