ಬೆಂಗಳೂರು: ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿನ್ನೆ (ಶುಕ್ರವಾರ) ಹೃದಯಾಘಾತದಿಂದ ವಿಧಿವಶರಾಗಿದ್ದು, ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಲಕ್ಷಾಂತರ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆಯವರೆಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಅಪ್ಪು ಅವರ ಹಿರಿಯ ಪುತ್ರಿ ಧೃತಿ ನ್ಯೂಯಾರ್ಕ್ನಿಂದ ದೆಹಲಿಯ ಆಗಮಿಸಿದ್ದು, ಬೆಂಗಳೂರಿಗೆ ಪ್ರಯಾಣ ಆರಂಭಿಸಲಿದ್ದಾರೆ. ಅವರು ಸಂಜೆ 4:15ರ ಸುಮಾರಿಗೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ನೇರವಾಗಿ ತಂದೆಯ ಪಾರ್ಥಿವ ಶರೀರ ನೋಡಲು ಧೃತಿ ಕಂಠೀರವ ಸ್ಟೇಡಿಯಂಗೆ ಬರಲಿದ್ದಾರೆ. ಹೀಗಾಗಿ ರಾತ್ರಿಯ ಸಮಯದಲ್ಲಿ ಅಂತ್ಯಕ್ರಿಯೆ ಮಾಡುವುದು ಬೇಡ ಎನ್ನುವ ರಾಜ್‌ಕುಮಾರ್ ಕುಟುಂಬಸ್ಥರ ಸಲಹೆ ಮೇರೆ ಸಿಎಂ ಬೊಮ್ಮಾಯಿ ನಾಳೆ ಅಂತ್ಯಕ್ರಿಯೆ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅವರ ಅಂತ್ಯಕ್ರಿಯೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಕಂಠೀರವ ಸ್ಟುಡಿಯೋ ಮುಂದೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೇ ಸಾರ್ವಜನಿಕ ಪ್ರವೇಶವಕ್ಕೂ ನಿಷೇಧ ಹೇರಲಾಗಿದೆ.
PublicNext
30/10/2021 02:03 pm