ಚಿತ್ರದುರ್ಗ: ಪೇ ಸಿಎಂ ಅಭಿಯಾನ ಮಾಡುತ್ತಿರುವ ಕಾಂಗ್ರೆಸ್ಸಿನದ್ದು ಡರ್ಟಿ ಪಾಲಿಟಿಕ್ಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಯಾವುದಾದರೂ ವಿಚಾರವಿದ್ದರೆ, ನೇರವಾಗಿ ಮಾತಾಡಬೇಕು, ದಾಖಲೆ ನೀಡಬೇಕು ಹಾಗೂ ತನಿಖೆಯಾಗಬೇಕು. ಯಾವುದೇ ವಿಚಾರವಿಲ್ಲದೆ, ಪೂರ್ಣಪ್ರಮಾಣದ ತಯಾರಿ ಇಲ್ಲದೇ ಸದನಕ್ಕೆ ಬರುತ್ತಾರೆ. ಇದು ಅವರ ನೈತಿಕತೆಯ ಅಧ:ಪತನ ತೋರುತ್ತದೆ. ನೈತಿಕತೆ ಇಲ್ಲದೆ ಹೆಸರು ಕೆಡಿಸುವ ಕಾರ್ಯಕ್ರಮವಿದು ಎಂದರು.
ಜನಪರ ಕಾಳಜಿ ಇಲ್ಲದೆ ಡರ್ಟಿ ಪಾಲಿಟಿಕ್ಸ್ ಮಾಡಿಕೊಂಡು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಇದೆಲ್ಲಾ ಕರ್ನಾಟಕದಲ್ಲಿ ಸಾಧ್ಯವಿಲ್ಲ. ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ 95 ರಿಂದ 100 ಸ್ಥಾನಗಳು ದೊರಕಬಹುದು ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲಾ ಸಮೀಕ್ಷೆಗಳು ಒಂದೊಂದು ರೀತಿಯಲ್ಲಿ ಬರುತ್ತವೆ. ಅದಕ್ಕಿಂತ ಜನರ ನಾಡಿ ಮಿಡಿತ ನಮಗೆ ಗೊತ್ತಿದೆ. ನಾವೂ 30-35 ವರ್ಷಗಳ ಕಾಲ ರಾಜಕಾರಣದಲ್ಲಿದ್ದೇವೆ. ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
PublicNext
24/09/2022 02:10 pm