ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಘಟನೆ ಸಂಬಂಧ ವಸತಿ ಶಾಲೆಯ ಪ್ರಾಂಶುಪಾಲೆ ರಾಜೇಶ್ವರಿ ಮತ್ತು ವಾರ್ಡನ್ ಚಿಂತನ್ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಡಿಸೆಂಬರ್ 30ರಂದು ರಾತ್ರಿ ಮನಿತ್ ವಸತಿ ಶಾಲೆಯ ಕಟ್ಟಡದ ಮೇಲಂತಸ್ತಿನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಗಾಯಗೊಂಡ ಬಾಲಕನಿಗೆ ಬೇಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟು ತಿಂದು ಕೋಮಾ ಸ್ಥಿತಿಯಲ್ಲಿದ್ದ ಮನೀತ್‌ನನ್ನು ಆತನ ಪೋಷಕರ ಮನವಿಯಂತೆ ಅಪೊಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಗುರುವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಗುರುವಾರ ಸಂಜೆ ಮನಿತ್ ಶವವನ್ನು ಮುಡಿಗುಂಡ ಬಡಾವಣೆಯಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಪ್ರಕರಣದ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಮತ್ತು ವಾರ್ಡನ್ ಮೇಲ್ನೋಟಕ್ಕೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರನ್ನೂ ಅಮಾನತು ಮಾಡಲಾಗಿದೆ. ವಿದ್ಯಾರ್ಥಿ ಮೃತಪಟ್ಟಿರುವುದು ನೋವಿನ ಸಂಗತಿ. ಘಟನೆ ಬಗ್ಗೆ ನಿಖರ ಮಾಹಿತಿ ತಿಳಿಯಲು ಉಪ ವಿಭಾಗಾಧಿಕಾರಿ ಸೇರಿದಂತೆ ಮೂವರ ಸಮಿತಿ ನೇಮಿಸಲಾಗಿದೆ. ಶನಿವಾರ ವರದಿ ಕೊಡಲಿದ್ದು, ಅದರ ಆಧಾರದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು. ವಿದ್ಯಾರ್ಥಿ ಮೃತಪಟ್ಟ ಸಂಬಂಧ ಈಗಾಗಲೇ ಸರ್ಕಾರಕ್ಕೆ ಮಾಹಿತಿ ಕೊಡಲಾಗಿದೆ. ಸಿಸಿಟಿವಿ ವೈರ್ ಕೂಡ ಘಟನೆ ನಡೆದ ರಾತ್ರಿ ತುಂಡಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ'' ಎಂದು ತಿಳಿಸಿದ್ದಾರೆ.
Kshetra Samachara
03/01/2025 07:35 pm