ಅಥಣಿ: ಅಥಣಿ ತಾಲೂಕಿನ ಕೊಕಟನೂರ ತೋಟದ ವಸತಿ ಪ್ರದೇಶದಲ್ಲಿ ಸೋಮವಾರ ರಾತ್ರಿ ಚಿರತೆಯನ್ನು ನೋಡಿರುವುದಾಗಿ ಕೆಲ ಯುವಕರು ತಿಳಿಸಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ.
ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದಾಗ ಕೆಲ ಹೊತ್ತಿನ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಚಿರತೆ ಕಂಡ ಯುವಕರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ಚಿರತೆ ನೋಡಿದ್ದೆವೆ ಎನ್ನಲಾದ ಸ್ಥಳದಲ್ಲಿ ಪ್ರಾಣಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದಾರೆ. ಹೆಜ್ಜೆ ಗುರುತು ಚಿರತೆಯದ್ದಲ್ಲ. ಕತ್ತೆ ಕಿರುಬದ ಹೆಜ್ಜೆ ಇರಬಹುದು ಎಂದು ಶಂಕಿಸಲಾಗಿದೆ.
ಯುವಕರು ರಾತ್ರಿ ಕತ್ತೆ ಕಿರುಬ ಕಂಡು ಚಿರತೆ ಎಂದು ಭಾವಿಸಿರಬಹುದು. ನಮ್ಮ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ ಯಾರೂ ಭಯ ಪಡಬೇಕಿಲ್ಲ. ಆದರೂ ಜನರು ಒಂಟಿಯಾಗಿ ಗದ್ದೆಯೊಳಗೆ ತೆರಳಬಾರದು ಎಂದು ವಲಯ ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗಾಣಿಗೇರ ತಿಳಿಸಿದ್ದಾರೆ.
PublicNext
20/09/2022 09:04 am