ಅಥಣಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಬರೀ ಕಾಟಾಚಾರದ ಚರ್ಚೆ, ಬರೀ ರಾಜಕೀಯ ಹಿತಾಸಕ್ತಿಗಳ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ರೈತರ ಬಗ್ಗೆ ಚರ್ಚೆ ಆಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ನಿನ್ನೆ ನಡೆದ ಬಸವೇಶ್ವರ ಏತ ನೀರಾವರಿ ವಿಳಂಬ ಕುರಿತು ಹೋರಾಟದಲ್ಲಿ ಭಾಗಿಯಾಗಿ ಮಾಧ್ಯಮಕ್ಕೆ ಪ್ರತಿಕ್ರಿಸಿದ ಅವರು, ಗಡಿ ರೈತರ ಕನಸಿನ ಯೋಜನೆಯಾದ ಬಸವೇಶ್ವರ ಏತ ನೀರಾವರಿ ವಿಳಂಬದ ಹಿಂದೆ ಹಲವು ಕಾಣದ ಕೈಗಳಿವೆ. ಸರ್ಕಾರದ ಹಣ ಲೂಟಿಯಾಗಿದೆ ಬಹು ಜನರ ಬೇಡಿಕೆ ಈಡೇರಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಅಧಿವೇಶನದಲ್ಲಿ ರೈತರ ಬಗ್ಗೆ ಚರ್ಚೆ ಆಗಬೇಕು. ಕಾಲ ಹರಣ ಮಾಡುವುದನ್ನ ಬಿಟ್ಟು ರೈತರ ಬಗ್ಗೆ ಚರ್ಚೆಯಾಗಲಿ. ರಾಜ್ಯದಲ್ಲಿ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಪ್ರತಿ ಟನ್‌ಗೆ ಐದು ಸಾವಿರ FRP ದರ ನಿಗದಿಯಾಗಬೇಕು. ಈ ಕುರಿತು ಡಿಸೆಂಬರ್ 16ರಂದು ಸುಮಾರು ಒಂದು ಲಕ್ಷ ರೈತರು ಬೆಳಗಾವಿ ಸುವರ್ಣ ಸೌಧದ ಎದುರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಶೀಘ್ರವೇ ಸರ್ಕಾರ ಪ್ರತಿ ಟನ್‌ಗೆ ಐದು ಸಾವಿರ ದರ ನಿಗದಿ ಮಾಡುವಂತೆ ಆಗ್ರಹಿಸಿದರು.
PublicNext
14/12/2024 08:11 am