ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ರಾಯಚೂರು ತಾಲೂಕಿನ ಗಿಲೆಸುಗೂರು ಗ್ರಾಮದಲ್ಲಿ ಅದ್ದೂರಿ ಚಾಲನೆ ದೊರೆಯಿತು.
ಬೃಹತ್ ಸಮಾವೇಶದಲ್ಲಿ ಮರದಿಂದ ಭತ್ತವನ್ನು ಸುರಿಯುವ ಮೂಲಕ ಜನ ಸಂಕಲ್ಪ ಯಾತ್ತೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಅಸ್ತಿತ್ವ ಉಳಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯಿಂದ ಬಂದಿರುವವರು. ಯಾವಾಗ ಕಾಂಗ್ರೆಸ್ ಸೇರಿದರೋ ಅಂದಿನಿಂದ ಸಮಾಜವಾದವನ್ನು ಮಡಿಚಿ ಮನೆಯಲ್ಲಿಟ್ಟಿದ್ದಾರೆ. ಮರೆತುಬಿಟ್ಟಿದ್ದೀರಿ. ದುಃಖದ ಸಂಗತಿಯೆಂದರೆ ಆ ಸಣ್ಣ ಹುಡುಗನ ಕೈಕೆಳಗೆ ಸೇವೆ ಮಾಡುತ್ತೀರಲ್ಲ. ಅವರು ಓಡು ಎಂದರೆ ಓಡುತ್ತೀರಿ, ಕುಳಿತುಕೋ ಎಂದರೆ ಕುಳಿತುಕೊಳ್ಳುತ್ತೀರಿ. ಇದು ಸ್ವಾಭಿಮಾನದ ಸಂಕೇತವಲ್ಲ.
ಅಧಿಕಾರಕ್ಕಾಗಿ ಏನೆಲ್ಲವನ್ನೂ ಮಾಡಲು ಸಿದ್ಧರಾಗಿದ್ಧಿರಿ. ರಾಹುಲ್ ಗಾಂಧಿ ರಾಜಕೀಯದಲ್ಲಿ ಪ್ರಸ್ತುತವಾಗಬೇಕೆಂದು ಪಾದಯಾತ್ರೆ ಮಾಡುತ್ತಿದ್ದಾರೆ. ರೀಲಾಂಚಿಂಗ್ ರಾಹುಲ್ ಗಾಂಧಿ ಕಾರ್ಯಕ್ರಮವಿದು. ಈ ಯಾತ್ರೆ ದೇಶಕ್ಕಾಗಿ, ಜನರಿಗಾಗಿ, ದೀನದಲಿತರಿಗಾಗಿ ಅಲ್ಲ. ಅಂಥ ಭಾರತ್ ಜೋಡೋ ಯಾತ್ರೆಗೆ ನೀವು ಸಾಥ್ ನೀಡುತ್ತಿದ್ದೀರಿ, ನಿಮ್ಮ ಸ್ಥಾನ ಎಲ್ಲಿತ್ತು, ಏನಾಗಿದೆ ಎಂದು ನೀವು ನೋಡಿಕೊಳ್ಳಿ. ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ ಎಂದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅಲ್ಲಿರುವವರು ಸ್ವಲ್ಪ ದಿನಗಳಲ್ಲಿಯೇ ಈ ಕಡೆಗೆ ಬರುವವರಿದ್ದಾರೆ. ಈಗಾಗಲೇ ಸೂಚನೆಗಳು ಬರುತ್ತಿವೆ ಎಂದರು.
ರಾಜ್ಯಶಕ್ತಿ ಮತ್ತು ಜನ ಶಕ್ತಿ ಎರಡೂ ಪ್ರಜಾಪ್ರಭುತ್ವ ನಿರ್ಧಾರ ಮಾಡುತ್ತದೆ. ರಾಜ್ಯ ಶಕ್ತಿ ಜನಪರವಾಗಿದ್ದರೆ ಜನಶಕ್ತಿ ರಾಜ್ಯಪರವಾಗಿರುತ್ತದೆ. ರಾಜ್ಯಶಕ್ತಿ ಜನವಿರೋಧಿ ಕೆಲಸ ಮಾಡಿದಾಗ ಆಗ ಜನಶಕ್ತಿ ರಾಜ್ಯಶಕ್ತಿಯ ಪರವಾಗಿ ನಿಲ್ಲಲು ಸಾಧ್ಯವಿಲ್ಲ. ಕರ್ನಾಟಕ ಕಾಂಗ್ರೆಸ್ನ ಅಗ್ರಗಣ್ಯ ನಾಯಕರು ಹೇಳುವ ಅಹಿಂದದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ದೀನದಲಿತರನ್ನೊಳಗೊಂಡಿದೆ. ಅದರಲ್ಲಿ ಈಗ ಹಿಂದುಳಿದ ವರ್ಗದವದರು, ದೀನದಲಿತರು ಅವರನ್ನು ಬಿಟ್ಟುಹೋಗಿದ್ದಾರೆ.
ಕೇವಲ ಅಲ್ಪಸಂಖ್ಯಾತರಿದ್ದಾರೆ ಎಂದರು. ರಾಜ್ಯಕ್ಕೆ ಕಾಂಗ್ರೆಸ್ ದೌರ್ಭಾಗ್ಯ ನೀಡಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗದವರು, ದೀನದಲಿತರು ನೆನಪಾಗಲಿಲ್ಲ. ಅವರ ರಾಜಕುಮಾರ ಪಾದಯಾತ್ರೆ ಮಾಡುವರೆಂದು ರಾಯಚೂರಿಗೆ ತಯಾರಿಗೆ ಬಂದಿದ್ದಾರೆ. ಅವರಿಗೆ ರಾಯಚೂರಿನಲ್ಲಿ ಜನ ಸೇರುತ್ತಾರೋ ಇಲ್ಲವೋ ಎಂಬ ಭಯ ಇದೆ. ಅದಕ್ಕೆ ಬಂದಿದ್ದಾರೆ. ಎಸ್.ಸಿ ಎಸ್.ಟಿ ಮೀಸಲಾತಿ ಕಾಂಗ್ರೆಸ್ ಕೊಡುಗೆ ಎನ್ನುತ್ತಾರೆ. ಈ ರಾಜ್ಯವನ್ನು 60 ವರ್ಷ ಆಡಳಿತದಲ್ಲಿ 50 ವರ್ಷ ನೀವೇ ಆಳಿದ್ದೀರಿ. ಅಧಿಕಾರದಲ್ಲಿ ಇದ್ದಾಗ ದೀನದಲಿತರ ಜನಸಂಖ್ಯೆ ಹೆಚ್ಚಾಗಿದೆ. ಅವುಗಳಿಗೆ ಹೆಚ್ಚು ಜಾತಿಗಳು ಸೇರ್ಪಡೆಯಾಗಿವೆ. ಅವರ ಮೀಸಲಾತಿ ಹೆಚ್ಚಿಸಬೇಕು, ಅವಮಾನ, ತುಳಿತಕ್ಕೆ ಒಳಗಾಗಿದ್ದಾರೆ.
PublicNext
11/10/2022 06:54 pm