ಬೆಂಗಳೂರು: ಕಾಂಗ್ರೆಸ್ ಪಕ್ಷ ಹಿಂದೆ ದೇಶಪ್ರೇಮಿ ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸಿದರೆ, ಬಿಜೆಪಿಯು ದೇಶದ್ರೋಹಿ ಪಿಎಎಫ್‌ಐ ಸಂಘಟನೆಯನ್ನು ನಿಷೇಧಿಸಿದೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವ್ಯತ್ಯಾಸ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಸಿಮಿ ಸಂಘಟನೆ ನಿಷೇಧಿಸಿದ್ದರು. ಅದೇರೀತಿ ಈಗ ಪಿಎಫ್‌ಐ ಸಂಘಟನೆ ನಿಷೇಧಿಸಲಾಗಿದೆ. ಪಿಎಫ್‌ಐ ನಿಷೇಧಕ್ಕೆ ಕಾಂಗ್ರೆಸ್ ಕೇವಲ ಟ್ವೀಟ್‌ನಲ್ಲಿ ಸ್ವಾಗತ ಮಾಡಿದರೆ ಪ್ರಯೋಜನವಿಲ್ಲ. ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಕು ಎಂದರು.
ಹಿಂದೆ ಪಿಎಫ್‌ಐ ಸಂಘಟನೆಯನ್ನು ಪೋಷಿಸಿ ಬೆಳೆಸಿದ್ದು ಕಾಂಗ್ರೆಸ್ ಪಕ್ಷ. ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ 18 ಹಿಂದೂ ಕಾರ್ಯಕರ್ತರ ಹತ್ಯೆಗಳಲ್ಲಿ ಪಿಎಫ್‌ಐ ಕೈವಾಡವಿದ್ದರೂ ಖಂಡಿಸಲಿಲ್ಲ. ಡಿಜಿ ಹಳ್ಳಿ, ಕೆ.ಜಿ ಹಳ್ಳಿ, ಹುಬ್ಬಳ್ಳಿ, ಮಂಗಳೂರು ಗಲಭೆಗಳು ನಡೆದಾಗಲೂ ಪಿಎಫ್‌ಐ ಸಂಘಟನೆಯನ್ನು ಟೀಕಿಸಲಿಲ್ಲ. ದಲಿತ ಶಾಸಕರ ಮನೆಗೆ ಬೆಂಕಿ ಹಾಕಿದಾಗಲೂ ಮತಾಂಧ ಶಕ್ತಿಗಳ ಓಲೈಕೆಗೆ ಕಾಂಗ್ರೆಸ್ ಮುಂದಾಯಿತು ಎಂದು ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಪಿಎಫ್‌ಐ ನಿಷೇಧಿಸುವಂತೆ ಕಾಂಗ್ರೆಸ್ ಹಾಕಿದ ಸವಾಲನ್ನು ಸ್ವೀಕರಿಸಿ ನಿಷೇಧಿಸಿದ್ದೇವೆ. ಈಗ ಆರ್‌ಎಸ್‌ಎಸ್ ಸಂಘಟನೆ ನಿಷೇಧಿಸಿ ಎನ್ನುವ ಕಾಂಗ್ರೆಸ್ ಬುದ್ದಿಮಟ್ಟದ ಬಗ್ಗೆ ತಿಳಿಯುತ್ತಿಲ್ಲ. ದೇಶಭಕ್ತಿ, ಸೇವೆ, ತ್ಯಾಗ, ಬಲಿದಾನ, ಹಾಗೂ ಸರಳತೆ ಮೈಗೂಡಿಸಿಕೊಂಡಿರುವ ಆರ್‌ಎಸ್‌ಎಸ್ ಬಗ್ಗೆ ಟೀಕೆ ಸಹಿಸುವುದಿಲ್ಲ. ಪಿಎಫ್‌ಐ ನಿಷೇಧಿಸಿದ್ದಕ್ಕೆ ಸ್ವಾಗತ ಮಾಡುವ ಬದಲು ಕಾಂಗ್ರೆಸ್‌ಗೆ ತಳಮಳ, ಗಲಿಬಿಲಿ ಏಕೆ ಎಂದು ಪ್ರಶ್ನಿಸಿದರು.
Kshetra Samachara
28/09/2022 08:33 pm