ಬೆಂಗಳೂರು : ಬೆಂಗಳೂರು ಹಿಂದೂ ಪರ ಸಂಘಟನೆಗಳಿಂದ ಈದ್ಗಾ ಗೋಡೆ ಕೆಡವಲು ಆಗ್ರಹಿಸಿವೆ. ಈ ಮೈದಾನದ ಒಳಗಡೆ ಬಿಬಿಎಂಪಿ ಕಟ್ಟಡ ಇದೆ. ಅಶ್ವಥ ಕಟ್ಟೆ ಇದೆ, ಸಾಕಷ್ಟು ಮರಗಳಿವೆ ಅದ್ಯಾವುದು ಬದಲಾವಣೆ ಆಗಲ್ಲ. ಹಾಗೆಯೇ ಮೈದಾನದ ಒಳಗಡೆ ಇರುವ ಈದ್ಗಾ ಕಟ್ಟಡ ಕೂಡ ಬದಲಾವಣೆ ಆಗುವುದಿಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿದರು.
ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಾರೋಹಣ ಮಾಡಲಾಗುತ್ತಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದರು.
ಸ್ವಾತಂತ್ರ್ಯ ಮಹೋತ್ಸವದ ಸಿದ್ಧತೆ ಕುರಿತು ಕಂದಾಯ ಸಚಿವ ಆರ್.ಅಶೋಕ್ ಇಂದು ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನಂತರ, ಭದ್ರತೆ, ಅಗತ್ಯ ಕ್ರಮಗಳ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡುವುದು ಯಾರದ್ದೋ ವೈಯಕ್ತಿಕ ಸಮಸ್ಯೆ ಅಲ್ಲ. ದೇಶದ ಘನೆತಯ ಪ್ರಶ್ನೆ. ಎಲ್ಲರೂ ಕೂಡ ಭಾಗಿಯಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯನ್ನು ಸಂಭ್ರಮದಿಂದ ಮಾಡಬೇಕಾಗಿದೆ ಎಂದರು.
ಎಲ್ಲಾ ಸಮುದಾಯವೂ ಸೇರಿಕೊಂಡು ಸ್ವಾತಂತ್ರ್ಯ ದಿನಾಚರಣೆ ಮಾಡಬೇಕು. ಇನ್ನೂ, ಹಿಂದೆ ಯಾಕೆ ಮಾಡಿಲ್ಲ ಅಂತ ಪ್ರಶ್ನೆ ಕೇಳಿದ್ದಾರೆ. ನಾನು ಈಗ ಕಂದಾಯ ಸಚಿವ ಆಗಿದ್ದೇನೆ.ಇದೇ ವರ್ಷ 75ನೇ ವರ್ಷ ಆಚರಣೆ ಇದೆ. ಹೀಗಾಗಿ ನಾನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದೇನೆ ಎಂದು ವಿವರಿಸಿದರು.
ಸಚಿವ ಆರ್.ಅಶೋಕ್ ಇದೇ 15 ರಂದು ಧ್ವಜಾರೋಹಣ ಮಾಡಲಿದ್ದು, ಸಂಸದ ಪಿ.ಸಿ.ಮೋಹನ್, ಶಾಸಕ ಜಮೀರ್ ಅಹ್ಮದ್ ಖಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನೂ, ಉತ್ತರ ವಿಭಾಗದ ಎಸಿ ಡಾ.ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಪೊಲೀಸ್ ಪಥಸಂಚಲನ, ಸ್ಕೌಟ್ಸ್ ಅಂಡ್ ಗೈಡ್ಸ್ ನಿಂದಲೂ ವಿವಿಧ ಪ್ರದರ್ಶನ ನಡೆಯಲಿದೆ.
ಚಾಮರಾಜಪೇಟೆ ಈದ್ಗಾ ಮೈದಾನ ಸೂಕ್ಷ್ಮ ವಾಗಿರುವ ಹಿನ್ನೆಲೆ ನಾವು ಇಲ್ಲಿಯೂ ಪೊಲೀಸ್ ಭದ್ರತೆ ಹೆಚ್ಚಿಸಿದ್ದೇವೆ. ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಿಗಿ ಕ್ರಮ ಕೈಗೊಳ್ಳುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪರಿಶೀಲನೆ ನಡೆಸಿ ತಿಳಿಸಿದರು.
PublicNext
13/08/2022 10:22 pm