ದೊಡ್ಡಬಳ್ಳಾಪುರ: ಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಸಂಬಳ ಮತ್ತು ಗೌರವವನ್ನು ಆಡಳಿತ ಮಂಡಳಿ ಕೊಡುತ್ತಿಲ್ಲ. ಬೇಡಿಕೆ ಈಡೇರಿಕೆಗೆ ಯೂನಿಯನ್ ಮಾಡಿಕೊಂಡ್ರೆ ಕಾರ್ಮಿಕರನ್ನು ದೇಶದ ವಿವಿಧ ರಾಜ್ಯಗಳಿಗೆ ವರ್ಗಾವಣೆ ಮಾಡಿ ಯೂನಿಯನ್ ಒಡೆಯುವ ಸಂಚು ನಡೆಸುತ್ತಿದೆ ಎಂದು ಆರೋಪಿಸಿ ಟಾಪೆ ಟ್ರ್ಯಾಕ್ಟರ್ ಕಂಪೆನಿ ಆಡಳಿತ ಮಂಡಳಿ ವಿರುದ್ಧ 130 ಕಾರ್ಮಿಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಟಾಪೆ ಟ್ರ್ಯಾಕ್ಟರ್ ತಯಾರಿಕೆ ಡಿವಿಜನ್ ಇದೆ. ಇಲ್ಲಿ160ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಬಹುತೇಕ ಡಿಪ್ಲೊಮಾ ಮತ್ತು ಇಂಜಿನಿಯರ್ ಪದವೀಧರರೂ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಆದರೆ, ಆಡಳಿತ ಮಂಡಳಿ ಕಾರ್ಮಿಕರಿಗೆ ಕನಿಷ್ಠ ಮರ್ಯಾದೆ ಸಹ ಕೊಡುತ್ತಿಲ್ಲ. ಹೆಚ್ಚುವರಿ ದುಡಿಸಿದ್ದಕ್ಕೆ OT ನೀಡುತ್ತಿಲ್ಲ. ಇದರಿಂದ ಬೇಸತ್ತ ಕಾರ್ಮಿಕರು 2021ರ ಮಾರ್ಚ್ 14 ರಂದು ಟ್ರಾಕ್ಟರ್ ಆಂಡ್ ಫಾರ್ಮ್ ಇಕ್ವಿಪ್ ಮೆಂಟ್ ವರ್ಕರ್ಸ್ ಯೂನಿಯನ್ ಮಾಡಿಕೊಂಡರು. ಯೂನಿಯನ್ ಮಾಡಿದ್ದೇ ಕಾರ್ಮಿಕರ ಪಾಲಿಗೆ ಶಾಪವಾಗಿದೆ. ಯೂನಿಯನ್ ನಲ್ಲಿದ್ದ15 ಕಾರ್ಮಿಕರನ್ನು ದೂರದ ರಾಜ್ಯಗಳಿಗೆ ವರ್ಗಾವಣೆ ಮಾಡಲಾಗಿದೆ.
ಈ 15 ಕಾರ್ಮಿಕರು ವರ್ಗಾವಣೆ ರದ್ದು ಮಾಡುವಂತೆ ಒತ್ತಾಯಿಸಿ ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಆದರೆ, ಪ್ರತಿಭಟನೆಗೆ ಕಂಪೆನಿ ಮನಸು ಕರಗಲೇ ಇಲ್ಲ. ಕೊನೆಗೆ ಉಪವಾಸ ಪ್ರತಿಭಟನೆ ನಡೆಸಿದರು. ಹಸಿವಿನಿಂದ ಮಾಡುತ್ತಿದ್ದ ಪ್ರತಿಭಟನೆಯಿಂದ ಪ್ರೊಡಕ್ಷನ್ ಬರುತ್ತಿರಲಿಲ್ಲ. ಇದೇ ನೆಪ ಇಟ್ಕೊಂಡು ಆಡಳಿತ ಮಂಡಳಿ 130 ಕಾರ್ಮಿಕರಿಗೆ ಗೇಟ್ ಪಾಸ್ ನೀಡಿದೆ. ಇದರಿಂದ ನೊಂದ ಕಾರ್ಮಿಕರು ಫ್ಯಾಕ್ಟರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಕಳೆದ 9 ತಿಂಗಳಿಂದ ಸಂಬಳ ಇಲ್ಲದೆ ಕಾರ್ಮಿಕರ ಕುಟುಂಬಗಳ ಸ್ಥಿತಿ ಶೋಚನೀಯವಾಗಿದೆ. ಕಾರ್ಮಿಕರು ಕೆಲಸ ಮಾಡಲು ಸಿದ್ಧರಿದ್ದರೂ ಭಾಗಶಃ ಲಾಕ್ಔಟ್ ಜಾರಿಗೆ ತಂದು ಬಡಪಾಯಿ ಕಾರ್ಮಿಕರನ್ನು ಬೀದಿ ತಂದು ನಿಲ್ಲಿಸಲಾಗಿದೆ.
PublicNext
19/07/2022 07:24 pm