ಬೆಂಗಳೂರು: ಇ.ಡಿ.ಮೂಲಕ ಕಾಂಗ್ರೆಸ್ ನಾಯಕರನ್ನು ಹೆದರಿಸುತ್ತೀರಿ ಎಂದರೆ ಅದು ಬರೀ ಭ್ರಮೆ. ನಾವು ಯಾವುದೇ ಕಾರಣಕ್ಕೂ ಹೆದರಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಇ.ಡಿ. ನೋಟಿಸ್ ಖಂಡಿಸಿ ಶಾಂತಿನಗರ ಡಬಲ್ ರೋಡ್ ಬಳಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹೋರಾಟ ನಿರಂತರವಾಗಿ ನಡೆಯಲಿದೆ. ತನಿಖಾ ಏಜೆನ್ಸಿಗಳಿಂದ ಕಾಂಗ್ರೆಸ್ ನಾಯಕರನ್ನು ಹೆದರಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಮೋದಿಯವರೇ ಈ ಹುಚ್ಚು ಸಾಹಸ ಬಿಡಿ. ಇಲ್ಲವಾದರೆ ನಿಮಗೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇ.ಡಿ., ಐಟಿ, ಸಿಬಿಐನ್ನು ಸರ್ಕಾರದ ಕೈ ಗೊಂಬೆ ಮಾಡುತ್ತಿದ್ದಾರೆ. ಕೇಂದ್ರ ತನಿಖಾ ಏಜೆನ್ಸಿಗಳನ್ನು ಈ ಮುಂಚೆ ಎಂದೂ ಕೈ ಗೊಂಬೆ ಮಾಡಿದ ನಿದರ್ಶನ ಇಲ್ಲ. ಸಂವಿಧಾನದ ಎಲ್ಲ ಸಂಸ್ಥೆಗಳನ್ನು ಕೈ ಗೊಂಬೆ ಮಾಡಿ, ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ರಾಹುಲ್ ಗಾಂಧಿ, ಸೋನಿಯಾ ವಿರುದ್ಧ ಇ.ಡಿ. ಛೂ ಬಿಡಲಾಗಿದೆ. ಸುಳ್ಳು ಕೇಸ್ ನಲ್ಲಿ ಅವರನ್ನು ಸಿಲುಕಿಸಿ ಹೆದರಿಸುವ ಕೆಲಸ ಮಾಡಲು ಮೋದಿ ಮುಂದಾಗಿದ್ದಾರೆ. ಸುಳ್ಳು ಕೇಸ್ ಹಾಕಿದ್ದರ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ. ಕಾನೂನು ಎಲ್ಲರಿಗೂ ಸಮಾನವಾಗಿರುವಂತದ್ದು. ಆರ್ ಎಸ್ ಎಸ್ ನ ಹೆಡ್ಗೆವಾರ್ ಸ್ವಾತಂತ್ರ್ಯ ಹೋರಾಟದಲ್ಲಿ ಯಾವತ್ತಾದರೂ ಭಾಗಿಯಾಗಿದ್ದಾರಾ?. ನಿಮಗೆ ನೈತಿಕತೆ ಏನಿದೆ?. ಬಿಜೆಪಿಯವರು ದೇಶಕ್ಕಾಗಿ ತ್ಯಾಗ ಮಾಡಿದ್ದಾರಾ?. ಆರ್ ಎಸ್ ಎಸ್ ನವರು ಮಾಡಿದ್ದೀರಾ? ಎಂದು ಕೈ ನಾಯಕರು ಪ್ರಶ್ನೆ ಮಾಡಿ ಆಕ್ರೋಶ ಹೊರಹಾಕಿದ್ರು.
PublicNext
13/06/2022 09:45 pm