ಬೆಂಗಳೂರು: ಓಬಿಸಿ ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು ಹಾಗೂ ಪಂಚಮಸಾಲಿ ಜನಾಂಗವನ್ನು 2-ಎ ಗೆ ಯಾವುದೇ ಕಾರಣಕ್ಕೂ ಸೇರಿಸಬಾರದು ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಸರಕಾರಕ್ಕೆ ಆಗ್ರಹಿಸಿತು.
ಶನಿವಾರ ಪ್ರೆಸ್ ಕ್ಲಬ್ ನಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಸಿ ಪುಟ್ಟ ಸಿದ್ದಶೆಟ್ಟಿ, ಮೀಸಲಾತಿ ಸಂರಕ್ಷಣೆಗಾಗಿ ಪ್ರತಿ ಚಳುವಳಿಯನ್ನು ನಡೆಸಲಾಗುತ್ತಿದೆ. ಅದು ಗುರುವಾರ ಕುಂದಾನಗರಿ ಬೆಳಗಾವಿಗೆ ತಲುಪಿದ್ದು, ಅಲ್ಲಿನ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ತಳಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನೀಡಲಾದ ಮೀಸಲಾತಿಯನ್ನು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಉದ್ದೇಶವನ್ನು ಬದಲಿಸಲಾಗುತ್ತದೆ. ಇಂದು ಬಡತನ ನಿರ್ಮೂಲನೆಗಾಗಿ ಮೀಸಲಾತಿ ಎಂಬ ತಪ್ಪು ಕಲ್ಪನೆಯಿಂದ ಹೋರಾಟಗಳು ನಡೆಯುತ್ತಿವೆ. ಹಾಗಾಗಿ ಅದರ ವಿರುದ್ಧ ಹೋರಾಡಲು ನಾವು ಪ್ರತಿ ಚಳುವಳಿಯನ್ನು ಆರಂಭಿಸಿದ್ದೇವೆ. ಇದು ಮೀಸಲಾತಿ ಬದಲಿಸಲು ಪ್ರಯತ್ನಿಸುವವರು ವಿರುದ್ಧ ನಡೆಯುತ್ತಲೇ ಇರುತ್ತದೆ ಎಂದು ತಿಳಿಸಿದರು.
ನಮ್ಮ ಒಕ್ಕೂಟದಲ್ಲಿ 2- ಎ ಪ್ರವರ್ಗದ 102 ಜಾತಿಗಳು ಮತ್ತು ಪ್ರವರ್ಗ-1 ಕ್ಕೆ ಸೇರಿದ 95 ಜಾತಿಗಳಿದ್ದು ಒಟ್ಟು 197 ಜಾತಿಗಳನ್ನು ಪ್ರತಿನಿಧಿಸುತ್ತಿದ್ದೇವೆ . ರಾಜ್ಯದಲ್ಲಿ 1 ಕೋಟಿ 62 ಲಕ್ಷದಷ್ಟು ಜನಸಂಖ್ಯೆ ಇದ್ದೇವೆ . ಅಂದರೆ ಶೇಕಡ 27% ರಷ್ಟು . ಮುಂದುವರೆದ ಪಂಚಮಸಾಲಿ ಜಾತಿಯನ್ನು 2- ಎಗೆ ಸೇರಿಸಬೇಕೆಂದು ಶ್ರೀ ಜಯ ಬಸವ ಮೃತ್ಯುಂಜಯ ಸ್ವಾಮಿಗಳು ಹೋರಾಟ ನಡೆಸುತ್ತಿದ್ದಾರೆ . ಇವರ ನಿಲುವನ್ನು ಒಪ್ಪುವ ಹರಿಹರದ ಶ್ರೀ ವಚನಾನಂದಸ್ವಾಮಿಗಳು, ಮೀಸಲಾತಿ ವಿಚಾರದಲ್ಲಿ ಆತುರ ಬೇಡ ಎಂದಿದ್ದಾರೆ . ಈ ಗೊಂದಲ ದಿಂದ ಹೊಸದಾಗಿ ಮತ್ತೊಂದು ಮಠ ಅಸ್ತಿತ್ವಕ್ಕೆ ಬಂದಿರುತ್ತದೆ. ಅಖಿಲ ಭಾರತ ವೀರಶೈವ - ಲಿಂಗಾಯತ ಮಹಾಸಭ ಸಂಘಟನೆಯ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ತಮ್ಮ ಜಾತಿಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂದು ಕೇಂದ್ರ ಮತ್ತು . ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಪಂಚಮಸಾಲಿ ಜನಾಂಗವನ್ನು 2-ಎ ಗೆ ಸೇರಿಸಕೂಡದೆಂದು ಆಗ್ರಹಿಸಿದರು.
ಈಗ ನಾವು ಸಂವಿಧಾನದ ಆರ್ಟಿಕಲ್ 15(4) ಮತ್ತು 16 (4) ರ ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಶೇ 15 % ಮೀಸಲಾತಿ ಪಡೆಯುತ್ತಿದ್ದೇವೆ. ನಮ್ಮಲ್ಲಿ ಯಾರಿಗೂ ಭೂ ಒಡತನವಿಲ್ಲ . ಕುಲಕಸುಬು ಆಧಾರಿತ ಜೀವನ ನಡೆಸುತ್ತಿದ್ದೇವೆ. ಪಂಚಮಸಾಲಿಗಳು ಬೃಹತ್ ಉದ್ಯಮಿಗಳು, ಭೂ ಒಡೆಯವರು ಶ್ರೀಮಂತರು ಮತ್ತು ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಿಂಹಪಾಲು ಪಡೆದಿದ್ದಾರೆ. ಇವರು 2-ಎ ಗೆ ತಮ್ಮನ್ನು ಸೇರಿಸಬೇಕೆಂಬ ವಾದವನ್ನು ನಾವು ಖಂಡಿಸುತ್ತೇವೆ . ಇವರ ಚಳುವಳಿಗೆ ಪ್ರತಿ ಚಳುವಳಿ ನಡೆಸುತ್ತಿದ್ದೇವೆ. ಸರ್ಕಾರ ಇವರ ಅಸಂವಿಧಾನಕ ಬೇಡಿಕೆಗೆ ಮಣೆ ಹಾಕಬಾರದು. ನಮಗೆ ಅನ್ಯಾಯವಾದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಓ.ಬಿ.ಸಿ ಮೀಸಲು ಸಹಿತ ಚುನಾವಣೆ ನಡೆಸಿ, ಸಂವಿಧಾನದ 73 ಮತ್ತು 74 ನೇ ತಿದ್ದುಪಡಿ ನಂತರ ಓ.ಬಿ.ಸಿ.ಗಳಿಗೆ ಆರ್ಟಿಕಲ್ 243 (ಡಿ) ಮತ್ತು 243 (ಟಿ) ಪ್ರಕಾರ ಗ್ರಾಮಾಂತರ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ 1992 ರಿಂದಲೂ ಶೇ 27 % ರಷ್ಟು ರಾಜಕೀಯ ಮೀಸಲಾತಿ ನೀಡಲಾಗಿರುತ್ತದೆ .
ಈಗ ಸುಪ್ರೀಂ ಕೋರ್ಟ್ ತಾಂತ್ರಿಕ ಕಾರಣಗಳನ್ನು ಮುಂದು ಮಾಡಿ ಮೀಸಲಾತಿಗೆ ತಡೆ ನೀಡಿದೆ. ರಾಜ್ಯ ಸರ್ಕಾರ ಮೀಸಲು ಅವೈಕಾಶ ಕಲ್ಪಿಸಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಸಬೇಕು. ರಾಜ್ಯ ಹೈಕೋರ್ಟ್ ಮೂರು ತಿಂಗಳು ಅವಕಾಶ ಕೊಟ್ಟಿದೆ. ಮದ್ಯ ಪ್ರದೇಶ ಸರ್ಕಾರ ಮೂರು ಹಂತದ ಪರಿಶೀಲನಾ ವರದಿಯನ್ನು ಸುಪ್ರೀಂ ಕೋರ್ಟಿಗೆ ನೀಡಿ ಮೀಸಲಾತಿ ಸಹಿತ ಚುನಾವಣೆ ನಡೆಸುತ್ತಿದೆ. ಕಳೆದ ನಾಲ್ಕು ತಿಂಗಳಿಂದಲೂ ರಾಜ್ಯ ಸರ್ಕಾರ ಹೈಡ್ರಾಮ ಆಡುತ್ತಿದೆ. ಈಗ ಭಕ್ತವತ್ಸಲಂ ಕಮಿಟಿ ಮಾಡಿದೆ. ಈ ವಿಷಯದಲ್ಲಿ ಸರ್ಕಾರ ಇಚ್ಚಾ ಶಕ್ತಿ ಪ್ರದರ್ಶಿಸಬೇಕು . ಓ.ಬಿ.ಸಿ. ಕುರಿತು ಇರುವ ಬದ್ಧತೆ , ಕಾಳಜಿ ತೋರಿಸಬೇಕು ಎಂದು ಸರಕಾರವನ್ನು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸವಿತಾ ಸಮಾಜ ಮುಖಂಡ ನಾಗೇಶ್, ರವಿ ನಾಯ್ಡು, ಗಾಣಿಗ ಸಮಾಜ ಮುಖಂಡ ವೇಣು ಗೋಪಾಲ, ಶಿವಕುಮಾರ್ ಚೌಡ ಶೆಟ್ಟಿ, ಬಳಜಿ ಸಮುದಾಯ ಮುಖಂಡ ವೆಂಕಟೇಶ್ ,ಬಸಪ್ಪ ಉಪಸ್ಥಿತರಿದ್ದರು.
PublicNext
28/05/2022 08:14 pm