ಬೆಂಗಳೂರು: ನಾನು ಹಾಗೂ ಕೇಂದ್ರದ ಮಾಜಿ ಸಚಿವ ದಿ.ಅನಂತ ಕುಮಾರ್ ಕಾಲೇಜ್ ಮೇಟ್ಸ್, ನಾವಿಬ್ಬರು ತುಂಬಾ ಕ್ಲೋಸ್ ಫ್ರೆಂಡ್ಸ್. ಕ್ಲಾಸ್ನಲ್ಲಿ ನಾವು ಒಬ್ಬರಿಗೊಬ್ಬರಿಗಾಗಿ ಸೀಟ್ ಹಿಡಿದುಕೊಳ್ಳುತ್ತಿದ್ದೆವು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದೆವು. ಚಿಕ್ಕಂದಿನಲ್ಲೇ ಅವರಲ್ಲಿನ ನಾಯಕತ್ವ ಗುಣವನ್ನು ಕಂಡಿದ್ದೆ ಎಂದು ಅನಂತ್ ಕುಮಾರ್ ಜೊತೆಗಿನ ಒಡನಾಟವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಿಸಿದರು.
ಜಯನಗರ ಬಡಾವಣೆಯಲ್ಲಿ ಇರುವ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ್ ಕುಮಾರ್ ಅವರ ಕಚೇರಿಯನ್ನು ಅನಂತ ಪ್ರೇರಣಾ ಕೇಂದ್ರವನ್ನಾಗಿ ಪರಿವರ್ತಿಸಲಾಗಿದ್ದು, ಈ ಕೇಂದ್ರವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಇಂದು ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅನಂತ್ ಕುಮಾರ್ ಒಬ್ಬ ನೈಜ ನಾಯಕ. ಯಾವುದೇ ಸ್ಥಿತಿಯಲ್ಲಿ ಯಾವುದೇ ಹಂತ ಇರಲಿ, ಆ ಎಲ್ಲ ಸ್ಥಿತಿಗಳಲ್ಲಿ ನಾಯಕತ್ವ ವಹಿಸುವ ನಿಜವಾದ ನಾಯಕ. ಕಾಲೇಜು ದಿನಗಳಿಂದ ಹಿಡಿದು ಎಬಿವಿಪಿ, ಬಿಜೆಪಿಯಲ್ಲಿ ಪಕ್ಷವನ್ನು ಅಧಿಕಾರ ತರಲು ನಾಯಕತ್ವ ವಹಿಸಿದ್ದರು. 10 ಜನ ಇದ್ದರೂ 10 ಲಕ್ಷ ಜನ ಇದ್ದರು ನಾಯಕತ್ವವಹಿಸಿದ ಅಪರೂಪದ ನಾಯಕ ಎಂದು ಬಣ್ಣಿಸಿದರು.
ಅವರು ಯಾವತ್ತೂ ಸಚಿವರು ಅನ್ನೋದನ್ನು ಎಲ್ಲಿಯೂ ತೋರಿಸುತ್ತಿರಲಿಲ್ಲ. ನೀರಾವರಿ ಯೋಜನೆಗಳು ಸೇರಿದಂತೆ ರಾಜ್ಯದ ನೆಲ ಜಲದ ವಿಚಾರದಲ್ಲಿ ಗಟ್ಟಿಯಾಗಿ ನಿಂತಿದ್ದವರು. ಕೃಷ್ಣಾ ನದಿ ವಿಚಾರದಲ್ಲಿ ಆಂಧ್ರ ಹಾಗೂ ನಮ್ಮ ನಡುವೆ ಗಲಾಟೆ ಆಗುವ ಸಂದರ್ಭ ಬಂದಿತ್ತು. ಅಂತಹ ಸಂದರ್ಭದಲ್ಲಿ ನ್ಯಾಯ ಸಮ್ಮತವಾಗಿ ಬರೆಯಬೇಕು ಅಂತಾ ಲಾ ಕಮೀಷನ್ ಜೊತೆ ಗುದ್ದಾಡಿ ಕರ್ನಾಟಕಕ್ಕೆ ಬಂದಿದ್ದ ಆಪತ್ತನ್ನು ತಪ್ಪಿಸಿದ್ದರು ಎಂದರು.
Kshetra Samachara
06/05/2022 06:04 pm