ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ)ಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ಕೆಪಿಎಸ್‌ಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಎಎಪಿ ಕಾರ್ಯಕರ್ತರನ್ನು ಪೊಲೀಸರು ಆರಂಭದಲ್ಲೇ ಬಂಧಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, "ಭ್ರಷ್ಟಾಚಾರದ ತಾಣ ಎಂಬ ಕುಖ್ಯಾತಿಗೆ ಒಳಗಾಗಿರುವ ಕರ್ನಾಟಕ ಲೋಕಸೇವಾ ಆಯೋಗವನ್ನು ಸರಿದಾರಿಗೆ ತರುವ ಕುರಿತು ಎಲ್ಲ ಸರ್ಕಾರಗಳು ಮಾತನಾಡಿವೆ. ಆದರೆ ಇದಕ್ಕೆ ಕಾಯಕಲ್ಪ ಮಾತ್ರ ಇನ್ನೂ ಆಗಿಲ್ಲ. ರಾಜ್ಯದ ಮೂರು ಕೋಟಿ ಯುವ ಜನತೆಯ ಪರವಾಗಿ ಹಾಗೂ ಈವರೆಗೂ ರಾಜ್ಯವನ್ನಾಳಿದ ಸರ್ಕಾರಗಳ ವಿರುದ್ಧ ಒಗ್ಗಟ್ಟಿನಿಂದ ಬಲ ಪ್ರದರ್ಶಿಸುವ ಸಮಯ ಇದೀಗ ಬಂದಿದೆ. ಒಂದು ಕಡೆ ವಿದ್ಯಾರ್ಹತೆಗೆ ಯೋಗ್ಯವಾದ ಕೆಲಸ ಸಿಗುತ್ತಿಲ್ಲ. ಮತ್ತೊಂದು ಕಡೆ ಸರ್ಕಾರಿ ಉದ್ಯೋಗಗಳನ್ನು ಮಾರಿಕೊಂಡು, ಅರ್ಹರಿಗೆ ಬಿಜೆಪಿ ಸರ್ಕಾರವು ಅನ್ಯಾಯ ಮಾಡುತ್ತಿದೆ. ಇದರಿಂದಾಗಿ ಸರ್ಕಾರಿ ಉದ್ಯೋಗಗಳು ಉಳ್ಳವರು ಹಾಗೂ ಭ್ರಷ್ಟರ ಪಾಲಾಗುತ್ತಿವೆ" ಎಂದು ದೂರಿದರು.
"ನಾಡಿನ ಯುವಜನತೆಗೆ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಕರ್ನಾಟಕ ಲೋಕಸೇವಾ ಆಯೋಗವನ್ನು ಸ್ಥಾಪಿಸಲಾಗಿದೆ. ಆದರೆ ಇದು ಉದ್ಯೋಗಗಳನ್ನು ಭ್ರಷ್ಟ ರಾಜಕಾರಣಿಗಳಿಗೆ ಕೋಟಿ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವ ಅಂಗಡಿಯಾಗಿ ಪರಿವರ್ತನೆಗೊಂಡಿದೆ. ಅಕ್ರಮಕ್ಕೆ ಹೆಸರುವಾಸಿಯಾಗಿರುವ ಕೆಪಿಎಸ್‌ಸಿಯನ್ನು ಸರಿದಾರಿಗೆ ತರಲು ಸಾಧ್ಯವಾಗದಿದ್ದರೆ ಅದನ್ನು ಮುಚ್ಚಿ ಬಿಡುವುದೇ ಒಳ್ಳೆಯದು. ಕೆಪಿಎಸ್‌ಸಿ ಕಚೇರಿ ತನಕ ಮೆರವಣಿಗೆ ಹೊರಟಿದ್ದ ನಮ್ಮನ್ನು ಪೊಲೀಸರು ಆರಂಭದಲ್ಲೇ ತಡೆದಿದ್ದಾರೆ. ಕೆಪಿಎಸ್‌ಸಿಯಲ್ಲಿರುವ ಭ್ರಷ್ಟರನ್ನು ರಕ್ಷಿಸಲು ನಮ್ಮನ್ನು ಬಂಧಿಸಿದ್ದಾರೆ" ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.
PublicNext
04/05/2022 08:37 pm